ಕಮಲನಗರ: ಜಾತಿ, ಧರ್ಮ ರಹಿತ ಸಮಾಜ ನಿರ್ಮಾಣಕ್ಕಾಗಿ ೧೨ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯನ್ನು ೨೧ನೇ ಶತಮಾನದಲ್ಲಿ ಮುಂದುವರೆಸಿದ ನೂತನ ಅನುಭವ ಮಂಟಪದ ಶಿಲ್ಪಿ, ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು ಅಭಿನವ ಬಸವಣ್ಣ ಎಂದು ಕಲಬುರಗಿ ಸಾಹಿತಿ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ಬಣ್ಣಿಸಿದರು.
ಪಟ್ಟಣದ ಹಿರೇಮಠ ಶಾಖಾ ಮಠದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತ್ಯುತ್ಸವ ಹಾಗೂ ಕನ್ನಡ ರಥೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಮಾಜದಲ್ಲಿನ ಅಶಕ್ತರಿಗೆ ದಾಸೋಹದ ಜತೆಗೆ ಅನ್ನ ದಾಸೋಹವನ್ನು ಕರುಣಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ನಾಡಿನ ಶ್ರೇಷ್ಠ ಸಂತರಾಗಿದ್ದ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಕಮಲನಗರದಲ್ಲಿ ಭವ್ಯ ಜಯಂತಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ನುಡಿದಂತೆ ನಡೆದ ಶರಣರು. ಅವರ ಆದರ್ಶಮಯವಾದ ಜೀವನವು ಮುಂದಿನ ಪೀಳಿಗೆಯವರಿಗೆ ಸ್ಫೂರ್ತಿಯಾಗಬೇಕು. ದೇವನೊಬ್ಬನೇ ತಂದೆ ಮನುಜರೆಲ್ಲರೂ ಒಂದೇ ಎನ್ನುವ ವಿಶ್ವ ಭ್ರಾತೃತ್ವದ ಸಂದೇಶವನ್ನು ಸಾರಿ ಜಾತಿ, ವರ್ಣ, ವರ್ಗರಹಿತವಾದ ಕಲ್ಯಾಣ ರಾಜ್ಯವನ್ನು ಕಟ್ಟಲು ಹಗಲಿರುಳು ಪ್ರಯತ್ನಿಸಿದರು ಡಾ.ಚನ್ನಬಸವ ಪಟ್ಟದ್ದೇವರು ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಟೊಣ್ಣೆ ಪ್ರಾಸ್ತಾವಿಕ ಮಾತನಾಡಿದರು.
ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ತಾಪಂ ಇಒ ಮಾಣಿಕರಾವ ಪಾಟೀಲ್, ಎಡಿ ಹಣಮಂತರಾಯ ಕೌಟಗೆ, ಡಾ.ಸಂಜೀವಕುಮಾರ ಜುಮ್ಮಾ, ರೇವಣಪ್ಪ ಮಹಾಜನ, ಪ್ರಕಾಶ ಮಾನಕರಿ, ಡಾ.ಅಶೋಕ ಮಳಗೆ, ಸೂರ್ಯಕಾಂತ ದ್ವಾಸೆ, ಸುಭಾಷ ಮಿರ್ಚೆ, ಶಿವಾನಂದ ವಡ್ಡೆ, ಪ್ರವೀಣ ಪಾಟೀಲ್, ರಾಜಕುಮಾರ ಬಿರಾದಾರ, ಸುರೇಶ ಸೊಲ್ಲಾಪುರೆ, ಸಂತೋಷ ಬಿರಾದಾರ, ಬಾಲಾಜಿ ತೇಲಂಗ್ ಸೇರಿ ಸುತ್ತಲಿನ ಗ್ರಾಮಸ್ಥರು ಇದ್ದರು.
ಲಿಂಗಾನಂದ ಮಹಾಜನ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಡಿವಾಳಪ್ಪ ಮಹಾಜನ ಸ್ವಾಗತಿಸಿದರು. ಮಾದಪ್ಪಾ ಮಡಿವಾಳ ವಂದಿಸಿದರು. ಭೀಮರಾವ ಬಿರಾದಾರ ನಿರೂಪಣೆ ಮಾಡಿದರು.
ಮೆರುಗು ಹೆಚ್ಚಿಸಿದ ಮೆರವಣಿಗೆ: ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತ್ಯುತ್ಸವ ಹಾಗೂ ಕನ್ನಡ ರಥೋತ್ಸವ ಸಮಾರಂಭಕ್ಕೂ ಮುನ್ನ ಭವ್ಯ ಮೆರವಣಿಗೆ ನಡೆಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ಗುರುಬಸವ ಪಟ್ಟದ್ದೇವರನ್ನು ಸಾರೋಟಿನಲ್ಲಿ ಕೂಡಿಸಿ ಪಟ್ಟಣದ ಶನಿದೇವ ಮಂದಿರದಿಂದ ಶ್ರದ್ಧಾ ಭಕ್ತಿಯಿಂದ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯು ಶನಿದೇವ ಮಂದಿರ, ಅಲ್ಲಮಪ್ರಭು ವೃತ್ತ, ಪ್ರವಾಸಿ ಮಂದಿರ ಮಾರ್ಗ, ಬಸವೇಶ್ವರ ವೃತ್ತ, ಅಕ್ಕಮಹಾದೇವಿ ವೃತ್ತದ ಮೂಲಕ ಪಟ್ಟದ್ದೇವರ ಶಾಖಾಮಠಕ್ಕೆ ತಲುಪಿತು. ಡೊಳ್ಳು ಕುಣಿತ, ಲಮಾಣಿ ನೃತ್ಯ, ಶಾಲಾ ಮಕ್ಕಳ ಕೋಲಾಟ ಮೆರವಣಿಗೆಯ ಮೆರಗು ಹೆಚ್ಚಿಸಿದವು. ಭಕ್ತರು ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಡಾ.ಚನ್ನಬಸವ ಪಟ್ಟದ್ದೇವರ ಸತ್ಯ ಸಂಕಲ್ಪಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗಿ ಅಭಿಮಾನ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಎಲ್ಲ ಸಮೂದಾಯದವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸನ್ಮಾನ: ವಿವಿಧ ಸಮುದಾಯದ ಡಾ.ಚನ್ನಬಸವ ಪಟ್ಟದ್ದೇವರ ಭಕ್ತರಾದ ಬಸವರಾಜ ತೇಲಂಗ್, ದಿಲೀಪ ಹುನಸನಾಳೆ, ಉಮೇಶ ಬಳಕಟ್ಟೆ, ಜ್ಞಾನೇಶ್ವರ ಹಿಪ್ಪಳಗಾವೆ, ಸಂಜೀವ ಒಡೆಯರ್, ರಾಮ ರಾಠೋಡ್, ಪ್ರವೀಣ ಕದಮ್, ಬಾಲಾಜಿ ಚವ್ಹಾಣ್, ದಯಾನಂದ ವಡ್ಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶರಣರು ಲೌಕಿಕ ಬಂಧನದಲ್ಲಿ ಸಿಲುಕದೆ ಅಧ್ಯಾತ್ಮ ಅನುಸರಿಸಿ ಅರಿವಿನ ಅನುಭಾವದ ಮಾರ್ಗದಲ್ಲಿ ನಡೆದರು. ನುಡಿದಂತೆ ನಡೆಯುವೆ ಎನ್ನುವುದೇ ವಚನ. ವಚನ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅಂಧಶ್ರದ್ಧೆ, ಸ್ತ್ರೀ ಶೋಷಣೆ, ಭಯೋತ್ಪಾದಕತೆಯನ್ನು ಹೋಗಲಾಡಿಸಬಹುದು. ಶರಣರ ವಚನಗಳು ವಿಶ್ವದ ವಿಸ್ಮಯವಾಗಿವೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ
ಅಳಿವಿನಂಚಿನಲ್ಲಿದ್ದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿದ ಕೀರ್ತಿ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅನ್ಯ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಈ ಭಾಗದ ಗ್ರಾಮಗಳು ಕರ್ನಾಟಕದಲ್ಲಿ ಉಳಿಯಲು ಕಾರಣಕರ್ತರಾದ ಪಟ್ಟದ್ದೇವರ ಹುಟ್ಟೂರಾದ ಕಮಲನಗರದ ಹೆಸರನ್ನು ಚನ್ನಬಸವನಗರ ಎಂದು ನಾಮಕರಣವಾಗಲಿ.
| ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಕಲಬುರಗಿ ಸಾಹಿತಿ