ಚಿಕ್ಕೋಡಿ, ಬೆಳಗಾವಿ: ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಸೇರಿ ಮಹಾರಾಷ್ಟ್ರ ಹಾಗೂ ಗೋವಾಗಳಿಂದ ಸುಮಾರು 1 ಲಕ್ಷ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಡಜನರಿಗೆ, ಶೋಷಿತರಿಗೆ ಶಿಕ್ಷಣದ ಮೂಲಕ ತಮ್ಮ ಜೀವನ ಉಜ್ವಲಗೊಳಿಸುವ ಅವಕಾಶ ಕಲ್ಪಿಸಿರುವ ಡಾ.ಪ್ರಭಾಕರ ಕೋರೆ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಕೃಷ್ಣಾ ನದಿ ಮಹಾಪೂರ, ಕರೊನಾ ಸಂದರ್ಭದಲ್ಲಿ ಅನೇಕ ಸೇವೆ ಮಾಡುವ ಮೂಲಕ ಮಾನವೀಯತೆ ಮೆರೆದವರು ಡಾ. ಕೋರೆ. 75 ವಸಂತಗಳನ್ನು ಪೂರೈಸಿರುವ ಅವರ ಅಮೃತ ಮಹೋತ್ಸವ ಸಮಾರಂಭವನ್ನು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ, ಅಂಕಲಿ ಮತ್ತು ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಹಾಗೂ ಅವರ ಅಭಿಮಾನಿ ಬಳಗದಿಂದ ಅ.15ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮಾದರಿಯಾಗಿ ಆಚರಿಸೋಣ ಎಂದರು.
ಡಾ. ಕೋರೆ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಸೇರಿ ಉತ್ತರ ಕರ್ನಾಟಕದ ಶೋಷಿತ ಸಮಾಜದ ಜನರಿಗೆ ಶಿಕ್ಷಣ ನೀಡುವ ಕೆಎಲ್‌ಇ ಸಪ್ತರ್ಷಿಗಳು ಕಂಡ ಕನಸ್ಸನ್ನು ನನಸು ಮಾಡುವ ಜತೆಗೆ ಶಿಕ್ಷಣ ಆರೋಗ್ಯ, ಕೃಷಿ ಹಾಗೂ ಸಂಶೋಧನೆಗಳಲ್ಲಿ ಅಗಾಧವಾದದ್ದನ್ನು ಸಾಧಿಸಿ, ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಸಾಮಾನ್ಯ ಜನರಿಗೆ ಸಿಗಲೆಂದು 2,500 ಹಾಸಿಗೆಗಳ ಆಸ್ಪತೆ ಸ್ಥಾಪಿಸಿ, ಅದರಲ್ಲಿ ಸಾವಿರ ಹಾಸಿಗೆಗಳನ್ನು ಬಡ ಜನರಿಗೆ ಉಚಿತವಾಗಿ ಮೀಸಲಿರಿಸಿದ್ದಾರೆ ಎಂದು ತಿಳಿಸಿದರು.
ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಂಬಲ ಸಿಗಲೆಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ 10 ಸಾವಿರ ಮೆ.ಟನ್ ಕಬ್ಬು ನುರಿಸುವ ಜತೆಗೆ 1 ಲಕ್ಷ ಲೀ. ಇಥೆನಾಲ್, 28 ಮೆ. ವಿದ್ಯುತ್ ಪ್ರಕಲ್ಪ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕರಾದ ಅಜಿತ ದೇಸಾಯಿ, ಚೇತನ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಮಿರ್ಜೆ, ನಂದಕುಮಾರ ನಾಶಿಪುಡಿ, ರಾಮಚಂದ್ರ ನಿಶಾನದಾರ, ಮಲ್ಲಪ್ಪ ಮೈಶಾಲೆ, ಪರಸಗೌಡ ಪಾಟೀಲ, ತಾತ್ಯಾಸಾಬ ಕಾಟೆ, ಮಹಾಂತೇಶ ಪಾಟೀಲ, ಸಿದ್ದು ಮಗದುಮ್ಮ, ದೇವೆಂದ್ರ ಕರೋಶಿ, ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ ಇತರರಿದ್ದರು.