ಜಿಲ್ಲೆ

ಡಾ.ಕೆ.ಎಸ್.ಸದಾನಂದ ಅವರಿಗೆ ಎಚ್.ಕೆ.ವೀರಣ್ಣಗೌಡ ವೈದ್ಯಕೀಯ ಪ್ರಶಸ್ತಿ

ಮೈಸೂರು: ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಆ ಬೆನ್ನೆಲುಬನ್ನು ಕಾಪಾಡುವವರು ವೈದ್ಯರು. ಆದ್ದರಿಂದ ವೈದ್ಯರು ದೇವರಿಗೆ ಸಮಾನ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಬಣ್ಣಿಸಿದರು.
ಮದ್ದೂರಿನ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2022-23ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮೈಸೂರು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಅವರಿಗೆ ಎಚ್.ಕೆ.ವೀರಣ್ಣಗೌಡ ವೈದ್ಯಕೀಯ ಪ್ರಶಸ್ತಿ ನೀಡಿ ದಂಪತಿಯನ್ನು ಅಭಿನಂದಿಸಿ ಅವರು ಮಾತನಾಡಿದರು.
ನಾನೊಬ್ಬ ಮಾಜಿ ಸೈನಿಕ. ನಾನು ಸೇನೆಯಲ್ಲಿದ್ದಾಗ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ನನ್ನ ದೇಹಕ್ಕೆ ಗುಂಡು ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದೆ. ಈ ಸಂದರ್ಭದಲ್ಲಿ ನನಗೆ ದೇವರಾಗಿ ಬಂದು ನನ್ನ ಜೀವ ಉಳಿಸಿದವರು ವೈದ್ಯರು. ಹಾಗಾಗಿ ವೈದ್ಯರ ಬಗ್ಗೆ ನನಗೆ ವಿಶೇಷ ಗೌರವಿದೆ ಎಂದರು.
ಡಾ. ಸಿ.ಎನ್. ಮಂಜುನಾಥ್ ನೇತೃತ್ವದಲ್ಲಿ ಜಯದೇವ ಆಸ್ಪತ್ರೆ ದೇಶದಲ್ಲಿಯೇ ಮಾದರಿಯಾಗಿದೆ. ಮೈಸೂರಿನಲ್ಲಿ ಡಾ.ಸದಾನಂದ ಅವರು ಸೇವೆ ಮಾಡುತ್ತ ಸಾವಿರಾರು ಬಡರೋಗಿಗಳ ಜೀವವನ್ನು ಉಳಿಸಿದ್ದಾರೆ. ಆದ್ದರಿಂದ ಅವರಿಗೆ ವೀರಣ್ಣಗೌಡ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಗುರಿ ಮತ್ತು ಛಲ ಇಟ್ಟುಕೊಂಡು ಮೊಬೈಲ್‌ನಿಂದ ದೂರವಿದ್ದು, ಚೆನ್ನಾಗಿ ಓದಿ ಮಂಜುನಾಥ್, ಸದಾನಂದ ಸೇರಿದಂತೆ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಿ. ಈ ಭೂಮಿ ಮೇಲೆ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಸದಾನಂದ್, ಡಾ. ಶ್ವೇತಾ ಸದಾನಂದ್ ಮಾತನಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಕೆ.ಟಿ. ಚಂದು, ಅಧ್ಯಕ್ಷ ಎಂ. ಸ್ವರೂಪ್‌ಚಂದ್, ಕಾರ್ಯದರ್ಶಿಗಳಾದ ಸಿ.ಅಪೂರ್ವಚಂದ್ರ, ಜಿ.ಎಸ್.ಶಿವರಾಮು, ಪ್ರಾಂಶುಪಾಲ ಜಿ.ಎಸ್. ಶಂಕರೇಗೌಡ, ಅಧ್ಯಾಪಕರಾದ ಶಿವಕುಮಾರ್, ಡಾ. ಕಿರಣ್, ಎ.ವಿ. ಪ್ರದೀಪ್, ಪ್ರಕಾಶ್, ದಿನೇಶ್‌ಗೌಡ ಇತರರು ಇದ್ದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.