ಹಾಸನ: ಡಾ. ಕಮಲಾ ಹಂಪನಾರವರದ್ದು ಸುಂದರ ಜೀವನ, ಆದರ್ಶ ದಾಂಪತ್ಯ, ಉತ್ತಮ ಶಿಕ್ಷಣ ಅವರು ನಡೆದ ದಾರಿ ಅನುಸರಣೀಯವಾದುದು ಎಂದು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಕೆ.ಸಿ.ಗೀತಾ ಅಭಿಪ್ರಾಯಪಟ್ಟರು.
ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ)ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯಕ್ಕೆ ಡಾ. ಕಮಲಾ ಹಂಪನಾ ಕೊಡುಗೆ ಎಂಬ ವಿಷಯದಡಿಯಲ್ಲಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನ ಪ್ರೀತಿ ಎಲ್ಲದರಲ್ಲಿ ಸುಂದರತೆ ಕಾಣಬೇಕು ಎನ್ನುತ್ತಿದ್ದರು. ಹೆಣ್ಣುಮಕ್ಕಳ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ಉದ್ದೇಶವೇನೆಂದರೆ ಕಮಲಾ ಹಂಪನಾರವರು ಆದರ್ಶ ಮಾದರಿ ಮಹಿಳೆಯಾಗಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡದ ಕಾಲದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಆಗಿ ಕರ್ತವ್ಯ ನಿರ್ವಹಿಸುವಂತಹ ಶಿಕ್ಷಣವನ್ನು ಪಡೆದ ಇವರ ಜೀವನ ಎಲ್ಲಾರಿಗೂ ಮಾದರಿ ಎಂದರು.
ಕಮಲಾ ಎಲ್ಲ ಪ್ರಕಾರಗಳಲ್ಲೂ ಗಂಭೀರ ಚಿಂತನೆ ,ಅಧ್ಯಯನ ಮತ್ತು ಸಂಶೋಧನೆ ನಡೆಸಿ ತಮ್ಮ ಕೊಡುಗೆ ನೀಡಿದ್ದಾರೆ. ಇವರು ಕುವೆಂಪುರವರ ಶಿಷ್ಯರಾಗಬೇಕೆಂದು ಹಪಹಪಿಸಿ ಸಾಧಿಸಿದರು. ಹಾಗೆ ಡಾ. ಹಾಮಾನಾಯಕರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದು, ಅನೇಕ ದಿಗ್ಗಜ ಕವಿಗಳ ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರೇಷ್ಠತೆಯ ಶಿಕ್ಷಣ ಪಡೆದರು. ಬಂಡಾಯ ಎಂದರೆ ಬದಲಾವಣೆ, ಒಂದು ಆರೋಗ್ಯಕರ ಬದಲಾವಣೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್ ಮಾತನಾಡಿ, ಮೆಲ್ಲ ದನಿಯ ಗಟ್ಟಿ ಮಾತಿನ ಸ್ತ್ರೀವಾದಿ ಡಾ. ಕಮಲಾ ಹಂಪನಾ ಅವರು. ಅವರ ಬರವಣಿಗೆಯ ಹರಹು ಬಹುದೊಡ್ಡದು. ಅವರು ತಮ್ಮ ಪತಿ ಹಂಪನಾ ಅವರಂತೆ ಜೈನ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ಸಂಶೋಧನೆ ಅವರ ನೆಚ್ಚಿನ ಕ್ಷೇತ್ರವಾಗಿತ್ತು. ಸಮಕಾಲಿನ ಮಹಿಳಾ ಸಾಹಿತಿಯಾಗಿರುವ ಡಾ.ಕಮಲಾ ಅವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಅವರ ಕವನ ಸಂಕಲನಗಳು, ಕಥಾಸಂಕಲನಗಳು, ವಿಮರ್ಶಾಕೃತಿಗಳು, ಸಂಪಾದಿತ ಕೃತಿಗಳು, ಸಂಶೋಧನಾ ಲೇಖನಗಳು, ಜೀವನ ಪರಿಚಯ, ಸಂಪಾದಿತ ಕೃತಿಗಳು, ವಚನ ಸಂಕಲನಗಳು, ಮಕ್ಕಳ ಪುಸ್ತಕಗಳು, ಅನುವಾದ ಕೃತಿಗಳು, ಆಕಾಶವಾಣಿ ನಾಟಕ ರೂಪಕಗಳನ್ನು ರಚಿಸಿದ್ದಾರೆ. ಬೇರು ಬೆಂಕಿ ಬಿಸಿಲು ಎಂಬ ಇವರ ಆತ್ಮಚರಿತ್ರೆಯು ಪ್ರಕಟಗೊಂಡಿದೆ. ಅಲ್ಲದೆ ಅತ್ತಿಮಬ್ಬೆ ಅಂಡ್ ಚಾಲುಕ್ಯಾಸ್, ಜೈನಿಸಂ ಅಂಡ್ ಅದರ್ ಎಸ್ಸೆಸ್ಸ್ ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ. 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕಮಲಾ ಹಂಪನಾ ಅವರು ಮೂಡಬಿದ್ರೆಯಲ್ಲಿ ನಡೆದ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೆಯ ಮಹಿಳಾ ಸರ್ವಾಧ್ಯಕ್ಷರಾಗಿದ್ದು ತುಂಬಾ ಹೆಮ್ಮೆಪಡುವ ವಿಚಾರ ಎಂದು ಹೇಳಿದರು.
ಶಾಲೆಯ ಹಿರಿಯ ಶಿಕ್ಷಕಿ ಲತಾಭಟ್ ಮಾತನಾಡಿ, ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಕಾಳಜಿಯುಳ್ಳ ಡಾ. ಕಮಲಾ ಹಂಪನಾ ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ 9 ಬೃಹತ್ ಸಂಪುಟಗಳು ಹೊರಬಂದಿದೆ. ಸಾಹಿತ್ಯದ ಸಾರವನ್ನು ಸಂರಕ್ಷಿಸವಲ್ಲಿ ದಲಿತ ಮಹಿಳೆಯರ ಪಾತ್ರವನ್ನು ಎತ್ತಿ ತೋರಿಸುವ ಮೂಲಕ ದಲಿತ ಮಹಿಳೆಯರಿಗೆ ಹಿಂದುಳಿದವರು ಎಂಬ ಹಣೆಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿರುವ ಕಟ್ಟಾ ಸ್ತ್ರೀವಾದಿ ಕಮಲಾ ಹಂಪನಾ ಅವರು ಇಂದು ಇಲ್ಲವಾಗಿರುವುದು ದುಃಖಕರ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ರೂಪಾ, ವೇದಶ್ರೀ ನಿಶಿತ್, ಕವಯಿತ್ರಿ ಯಮುನಾ, ಭವ್ಯಾ, ಮಲ್ಲೇಶಗೌಡ, ಆವೇಜ್ ಪಾಷಾ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.