ಮಂಗಳೂರು : ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ.ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪತ್ರಿಕೋದ್ಯಮ ಇತಿಹಾಸದಲ್ಲಿ ಮೊದಲ ಬಾರಿಗೆ ನೀಡಲಾದ ಪ್ರತಿಷ್ಠಿತ ‘ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ-2024 ’ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಬುಧವಾರ ಬೆಂಗಳೂರಿನ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಪ್ರದಾನ ಮಾಡಲಾಯಿತು.
ಸಹಕಾರ, ಸಮಾಜಸೇವೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ನಾಡಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ’ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ’ಯನ್ನು ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅವರು ಪ್ರದಾನ ಮಾಡಿದರು.
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಹಕಾರ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ನಿರಂತರವಾಗಿ ತೊಡಗಿಸಿಕೊಂಡು ಸರ್ವಧರ್ಮಿಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 30 ವರ್ಷಗಳಿಂದ ಸೇವೆ ನೀಡುತ್ತಿರುವ ಇವರು ಬ್ಯಾಂಕ್ ಅನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ . ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ
ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮ ನೀಡಿದ್ದಾರೆ. ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ಇವರದ್ದು. ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು. ಸಹಕಾರ , ಸಾಮಾಜಿಕ, ಬ್ಯಾಂಕಿಂಗ್, ಧಾರ್ಮಿಕ ಸಹಿತ ಹತ್ತು ಹಲವು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ರಾಜೇಂದ್ರ ಕುಮಾರ ರಾಜ್ಯದ ಧೀಮಂತ ಸಹಕಾರಿ ನಾಯಕರಲ್ಲಿ ಒಬ್ಬರು. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನವೋದಯ ಸ್ವಸಹಾಯ ಸಂಘಗಳ ಮೂಲಕ ನೀಡಿ , ಆರ್ಥಿಕ ಚೈತನ್ಯ ತುಂಬಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಗಣಕ ಯಂತ್ರ ವಿಜ್ಞಾನಿ ಡಾ. ಎಸ್.ಎಸ್. ಅಯ್ಯಂಗಾರ್, ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತುಮಕೂರು ಇದರ ಉಪ ಕುಲಪತಿ ಡಾ. ಕೆ. ಜಿ. ಲಿಂಗೇಗೌಡ, ಉದ್ಯಮಿ ಡಾ. ಕೆ. ಜಿ. ಪುರುಷೋತ್ತಮ್, ಅಬಕಾರಿ ಇಲಾಖೆಯ ಉಪ ಆಯುಕ್ತ ಡಾ. ಬಿ.ಆರ್. ಹಿರೇಮಠ್,ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ನಾಗರಾಜ್ ಕೆ. ಎಸ್., ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ್, ಗೌರವ ಅಧ್ಯಕ್ಷ ಎ. ನಾರಾಯಣಮೂರ್ತಿ, ಅಧ್ಯಕ್ಷ ಗಣೇಶ್ ಕಾಸರಗೋಡು ಉಪಸ್ಥಿತರಿದ್ದರು.