ಹುಬ್ಬಳ್ಳಿ: ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ದಿ. ಪದ್ಮಶ್ರೀ ಡಾ. ಆರ್. ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಜ. 10ರಂದು ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ಚೇರ್ಮನ್ ಡಾ. ಬಿ.ಆರ್. ಪಾಟೀಲ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ಥಳಿ ಅನಾವರಣಗೊಳಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಪ್ರಸಾದ ಅಬ್ಬಯ್ಯ ಪಾಲ್ಗೊಳ್ಳುವರು. ಸಂಸ್ಥೆಗೆ ಸರ್ಕಾರದಿಂದ ಮೊದಲ ಬಾರಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಸರ್ಕಾರ ನೀಡಿದ ಅನುದಾನದಲ್ಲಿ ಆಸ್ಪತ್ರೆಗೆ 5.5 ಕೋಟಿ ರೂ. ವೆಚ್ಚದ ಹೊಸ ರೇಡಿಯೋ ಥೆರಪಿ ಯಂತ್ರ ಹಾಗೂ ಒಂದು ಸಿಟಿ ಸ್ಕ್ಯಾನ್ (ಕಂಪ್ಯೂಟೆಡ್ ಟೊಮೊಗ್ರಫಿ ಸ್ಕ್ಯಾನ್) ಅಳವಡಿಸಲಾಗುತ್ತಿದೆ. ರೇಡಿಯೋ ಥೆರಪಿ ಯಂತ್ರವು ಕೇಂದ್ರ ಸರ್ಕಾರದ ಮೆಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಬೆಂಗಳೂರಿನಲ್ಲಿಯೇ ತಯಾರಾಗಿದ್ದು, ರೋಗಿಗಳಿಗೆ ಗುಣಮಟ್ಟದ ಹಾಗೂ ತ್ವರಿತ ಚಿಕಿತ್ಸೆ ಲಭ್ಯವಾಗಲಿದೆ. ಇದಲ್ಲದೇ ಶಸ್ತ್ರಚಿಕಿತ್ಸೆ ಕೊಠಡಿ, ಐಸಿಯು ವಿಭಾಗಕ್ಕೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ಸುಭಾಷ ಬೆಂಬಳಗಿ, ಜಂಟಿ ಕಾರ್ಯದರ್ಶಿ ದೀಪಕ ಷಾ, ನಿರ್ದೇಶಕರಾದ ಡಾ. ಎಸ್.ಎಸ್. ಹಿರೇಮಠ, ಡಾ. ವಿ.ಜಿ.ಯಳಮಲಿ, ಅನಿತಾ ಪಾಟೀಲ, ಮಹೇಂದ್ರ ಸಿಂಘಿ, ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ಇದ್ದರು.