ಅಥಣಿ: ಕಷ್ಟದಲ್ಲಿ ಬೆಳೆದು ಸಾಧನೆ ಮಾಡಿದ ಡಾ.ಅಪ್ಪಾಸಾಹೇಬ ಪೂಜಾರಿ ಅವರ ಸಾಹಿತ್ಯ ಸೇವೆ ಶ್ಲಾಘನೀಯ ಎಂದು ಜೆಎ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ರಾಮ ಕುಲಕರ್ಣಿ ಹೇಳಿದರು.
ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆ ಹಾಗೂ ಸಾಹಿತ್ಯ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಕಣ್ಣೀರಿನ ಅಕ್ಷರಗಳು' ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಪ್ಪಾಸಾಹೇಬ ಅವರ ಬದುಕು ವಿದ್ಯಾರ್ಥಿಗಳಿಗೆ ಸೂರ್ತಿಯಾಗಿದೆ ಎಂದರು.
ಮುಖ್ಯ ಅತಿಥಿ ಅರವಿಂದ ದೇಶಪಾಂಡೆ ಮಾತನಾಡಿ, ಕಡು ಬಡತನದಲ್ಲಿ ಸಾಧನೆ ಮಾಡಿದ ಡಾ.ಅಪ್ಪಾಸಾಹೇಬ ಬದುಕು ಎಲ್ಲರಿಗೂ ಮಾದರಿ. ಅವರ ಬದುಕಿನ ಎಲ್ಲ ಕ್ಷಣಗಳು ಈ ಕಣ್ಣೀರಿನ ಅಕ್ಷರದಲ್ಲಿ ಮುದ್ರಿತವಾಗಿದೆ ಎಂದು ತಿಳಿಸಿದರು.
ಲೇಖಕ ಡಾ. ಅಪ್ಪಾಸಾಹೇಬ ಪೂಜಾರಿ ಮಾತನಾಡಿ, ಜಾಧವಜಿ ಶಿಕ್ಷಣ ಸಂಸ್ಥೆಯ ಪ್ರತಿ ಕಲ್ಲಿನಲ್ಲಿ ನನ್ನ ನೆನಪುಗಳಿವೆ. ಪುಸ್ತಕ ಬಿಡುಗಡೆ ಜತೆಗೆ ನನ್ನನ್ನು ಗುರುತಿಸಿ ಸತ್ಕರಿಸಿದ್ದು ಸಂತಸ. ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯವೆಂದರು.
ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿದರು. ಅನುರಾಧಾ ದೇಶಪಾಂಡೆ, ಎಸ್.ಕೆ.ಕುಲಕರ್ಣಿ, ದುಷ್ಯಂತ ನಾಡಗೌಡ, ಬಿ.ಎ.ನಾವಲಗಟ್ಟಿ, ಆರ್.ಆರ್.ಒಡೆಯರ, ಎಸ್.ಎಂ.ಗೌಡರ, ಎಂ.ಬಿ.ಚರಂತಿಮಠ ಇತರರು ಇದ್ದರು. ಎನ್.ಬಿ.ಝೆರೆ ಪುಸ್ತಕ ಪರಿಚಯಿಸಿದರು. ಪಿ.ಎಂ.ಹುಲಗಬಾಳಿ ಮಾತನಾಡಿದರು. ಎಂ.ಪಿ.ಮೇತ್ರಿ ಸ್ವಾಗತಿಸಿದರು. ಜಿ.ಐ.ಪಾಟೀಲ ವಂದಿಸಿದರು.