ಔರಾದ್: ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಮೌಲ್ಯಯುತ ಮತದಾನದ ಹಕ್ಕನ್ನು ನೀಡುವ ಮೂಲಕ ಎಲ್ಲರೂ ಸಮಾನರು ಎಂದು ತಿಳಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಜನಾಂಗಕ್ಕೂ ಸ್ಫೂರ್ತಿ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ್ ಹೇಳಿದರು.
ಪಟ್ಟಣದ ಪತ್ರಿಸ್ವಾಮಿ ಶಾಲೆಯಲ್ಲಿ ಬೀದರ್‌ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಜೀವನ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ. ಶೋಷಿತರಿಗೆ ನ್ಯಾಯಸಮ್ಮತ ಹಕ್ಕುಗಳನ್ನು ಕಲ್ಪಿಸಿಕೊಟ್ಟ, ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಗೌರವಯುತ ಬದುಕಿಗಾಗಿ ಸಂವಿಧಾನ ಕೊಟ್ಟ ಮೇಧಾವಿ ಎಂದು ಬಣ್ಣಿಸಿದರು.
ಸಂಪನ್ಮೂಲ ವ್ಯಕ್ತಿ ಶಾಮಸುಂದರ ಖಾನಾಪುರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂಬೇಡ್ಕರ್ ಅವರ ಸಿದ್ಧಾಂತ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿದ್ಯಾರ್ಥಿನಿ ಸಂಧ್ಯಾರಾಣಿ ಮಾತನಾಡಿದರು. ಪ್ರಾಂಶುಪಾಲ ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರರಾದ ಸುನೀಲ ಕಡ್ಡೆ, ರವಿದಾಸ, ದಿಗಂಬರ, ಸಂಗಮೇಶ ಬೆಲ್ದಾಳ ಅವರು ಡಾ. ಅಂಬೇಡ್ಕರ್ ಜೀವನದ ಕುರಿತು ಹಾಡುಗಳು ಹಾಡಿ ಗಮನ ಸೆಳೆದರು.
ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಧ್ವನಿ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಜಾನ್ಸನ್ ಘೋಡೆ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕ್ಲೆಮೇಂಟಿನಾ, ರತ್ನದೀಪ ಕಸ್ತೂರೆ, ರೋಹಿತ ಕಾಂಬಳೆ ಇತರರಿದ್ದರು.
ಪ್ರಬಂಧ ಸ್ಪರ್ಧೆ: ಡಾ.ಅಂಬೇಡ್ಕರ್‌ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಕಾವೇರಿ ಮಾಧವರಾವ (ಪ್ರಥಮ), ಬಾಲಿಕಾ ಗೋವಿಂದರಾವ (ದ್ವಿತೀಯ), ಸಂಧ್ಯಾರಾಣಿ ಸಂಜುಕುಮಾರ (ತೃತೀಯ) ಹಾಗೂ ತನುಶ್ರೀ ದಿಗಂಬರ, ಸುರೇಖಾ ವಾಮನ (ಸಮಾಧಾನಕರ) ಬಹುಮಾನ ಪಡೆದರು. ಇವರನ್ನು ಇಲಾಖೆಯಿಂದ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.