ಜಿಲ್ಲೆ

ಡಯಾಲಿಸಿಸ್ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಸದರ ಸೂಚನೆ

ಮೈಸೂರು: ನಾನಾ ಕಾರಣದಿಂದ ಇತ್ತೀಚೆಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಡಯಾಲಿಸಿಸ್‌ಗೆ ಅನುಕೂಲವಾಗುವಂತೆ ನೂರು ಹಾಸಿಗೆಯುಳ್ಳ ಡಯಾಲಿಸಿಸ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಪ್ರತಾಪ್‌ಸಿಂಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ತ್ರೈ ಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ (ದಿಶಾ) ಅಧ್ಯಕ್ಷತೆ ಅವರು ಮಾತನಾಡಿದರು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಗಮನಿಸಿದರೆ ಮೈಸೂರಿಗೆ 200 ಹಾಸಿಗೆಗಳ ಡಯಾಲಿಸಿಸ್ ಆಸ್ಪತ್ರೆ ಅವಶ್ಯಕತೆ ಇದೆ. ಆದರೆ ಶತಮಾನೋತ್ಸವ ಪೂರೈಸಿರುವ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಸಂಭ್ರಮಾಚರಣೆ ನೆನಪಿನಲ್ಲಿ ಸಧ್ಯಕ್ಕೆ ನೂರು ಹಾಸಿಗೆಯ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಇರುವ ಜಾಗ ಅಥವಾ ಕಟ್ಟಡ ಎಲ್ಲಿದೆ ಎಂದು ಮೊದಲು ಗುರುತಿಸಬೇಕು. ಒಂದು ಡಯಾಲಿಸಿಸ್ ಯಂತ್ರೋಪಕರಣ ಖರೀದಿಗೆ 8 ಲಕ್ಷ ರೂ. ಅಗತ್ಯವಿದೆ. ಮೊದಲ ಹಂತದಲ್ಲಿ 20 ಯಂತ್ರೋಪಕರಣ ಖರೀದಿಗೆ ಪ್ರಯತ್ನಿಸೋಣ. ಟೆಕ್ನಿಷಿಯನ್, ನರ್ಸ್, ಸಿಬ್ಬಂದಿ ನಿಯೋಜಿಸಬೇಕು. ಕೆ.ಆರ್.ಆಸ್ಪತ್ರೆ, ಪಿಕೆಟಿಬಿ, ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ನಲ್ಲಿ ಖಾಲಿ ಇರುವ ಕಟ್ಟಡವನ್ನು ಬಳಸಿಕೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಆರ್.ಆಸ್ಪತ್ರೆಯಲ್ಲಿ ಈಗ 20 ಡಯಾಲಿಸಿಸ್ ಬೆಡ್‌ಗಳಿವೆ. ಹೆಚ್ಚಿನ ಯಂತ್ರೋಪಕರಣ ಅಳವಡಿಸಲು ಕಟ್ಟಡ ಸಮಸ್ಯೆ ಇದೆ. ಆದ್ದರಿಂದ ಪಿಕೆಟಿಬಿಯಲ್ಲಿ ಖಾಲಿ ಇರುವ ಜಾಗವನ್ನು ಬಳಸಿಕೊಂಡು ಅಲ್ಲಿ ಕಟ್ಟಡ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.
ಕೆ.ಆರ್.ಆಸ್ಪತ್ರೆ ಅಶುಚಿತ್ವದಿಂದ ಕೂಡಿದ್ದು, ಎಲ್ಲೆಂದರಲ್ಲಿ ಆಹಾರ ಬಿಸಾಡಲಾಗುತ್ತಿದೆ, ಸೊಳ್ಳೆ ಕಾಟ ಹೆಚ್ಚಾಗಿದೆ. ಶವಾಗಾರ ಒಬಿರಾಯನ ಕಾಲದಲ್ಲಿದೆ. ಆಡಳಿತ ಕಟ್ಟಡ ಭೂತ ಬಂಗಲೆಯಂತಿದೆ. ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಸಿ ಸುಂದರಗೊಳಿಸಬೇಕು. ಆಸ್ಪತ್ರೆಗೆ ಹೊಸ ರೂಪ ಕೊಡಬೇಕು ಎಂದು ಸಲಹೆ ನೀಡಿದರು.
ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವವನ್ನು ನೆನಪಿನಲ್ಲಿ ಉಳಿಯುವಂತೆ ಆಚರಿಸಬೇಕು. ಶತಮಾನೋತ್ಸವದ ನೆನಪಿಗಾಗಿ ಹೊರರೋಗಿ ವಿಭಾಗವನ್ನು ಹೊಸದಾಗಿ ಆರಂಭಿಸಬೇಕು. ಈ ನೂರನೇ ವರ್ಷ ಸಂಭ್ರಮಾಚರಣೆಗೆ ವಿಶೇಷ ಅನುದಾನ ನೀಡುವಂತೆ ನೂತನ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ಶತಮಾನೋತ್ಸವ ಸಂಭ್ರಮಾಚರಣೆಯ ಭಾಗವಾಗಿ ಹಿಂದಿನ ಸರ್ಕಾರ 89 ಕೋಟಿ ರೂ. ಅನುದಾನ ನೀಡಿತ್ತು. ಅದರಲ್ಲಿ 14 ಕಾಮಗಾರಿ ಕೈಗೊಳ್ಳಲಾಗಿತ್ತು. ಹಂತ ಹಂತವಾಗಿ ಪೂರ್ಣಗೊಳ್ಳುತ್ತಿವೆ. ಕಾಲೇಜಿನ ಯುಜಿ ಬಾಲಕರ ಹಾಸ್ಟೆಲ್ ಅನ್ನು ಹೊಸ ಕಟ್ಟಡಕ್ಕೆ ಬದಲಿಸಲಾಗಿದೆ. ಬಾಲಕಿಯರ ಹಾಸ್ಟೆಲ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಡಾ.ದಾಕ್ಷಾಯಿಣಿ ಮಾಹಿತಿ ನೀಡಿದರು.
ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಸಂಭ್ರಮಾಚರಣೆಯನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ ತಿಂಗಳಿಂದ ಆರಂಭಿಸಿ 2024ರ ಮಾರ್ಚ್ ತನಕ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅದಕ್ಕಾಗಿ ಲೋಗೋ ಬಿಡುಗಡೆ ಹಾಗೂ ರಾಷ್ಟ್ರಪತಿ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದರು.