ಜಿಲ್ಲೆ

ಡಯಾಬಿಟಿಕ್ ಕ್ಲಿನಿಕ್ ಸೇವೆಗೆ ಚಾಲನೆ

ಚಾಮರಾಜನಗರ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲು ಎನಿಸಿರುವ ಡಯಾಬಿಟಿಕ್ ಕ್ಲಿನಿಕ್‌ಗಳು ಆರಂಭವಾಗಿವೆ.

ತಾಲೂಕಿನ ವೆಂಕಟಯ್ಯನಛತ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಲಿನಿಕ್‌ಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಬುಧವಾರ ಚಾಲನೆ ನೀಡಿದರು. ಪ್ರತಿ ಬುಧವಾರ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಮಧುಮೇಹಿಗಳ ಆರೋಗ್ಯ ಕಾಳಜಿಗಾಗಿ ಡಯಾಬಿಟಿಕ್ ಕ್ಲಿನಿಕ್ ನಿರ್ವಹಣೆಯಾಗಲಿದೆ.

ಈ ವಿನೂತನ ಆರೋಗ್ಯ ಸೇವೆಯನ್ನು ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆಯು ಮೊದಲಿಗೆ ಆರಂಭಿಸುವ ಮೂಲಕ ಗಮನಸೆಳೆದಿದೆ. ಮಧುಮೇಹಿ ರೋಗಿಗಳಿಗೆ ತಪಾಸಣೆ, ಔಷದೋಪಾಚಾರ, ಡಯಾಬಿಟಿಕ್ ಚಾರ್ಟ್, ಪಥ್ಯ ಆಹಾರದ ವಿವರ ಸೇರಿದಂತೆ ಇತರೆ ಎಲ್ಲ ಸೇವೆ ಸಲಹೆಗಳನ್ನು ಡಯಾಬಿಟಿಕ್ ಕ್ಲಿನಿಕ್ ನಲ್ಲಿ ಒದಗಿಸಲಾಗುತ್ತಿದೆ. ಮಧುಮೇಹ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ನಿಯಮಾನುಸಾರ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡಿ ಮುಂದಿನ ಆರೋಗ್ಯ ಸೇವೆಗೆ ಅನುಸರಣೆ ಮಾಡುವಂತೆಯೂ ಸುತ್ತೋಲೆ ಹೊರಡಿಸಲಾಗಿದೆ. ಡಯಾಬಿಟಿಕ್ ಕ್ಲಿನಿಕ್ ನಿರ್ವಹಣೆ ಹಾಗೂ ಸುಸೂತ್ರವಾಗಿ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮೇಲ್ವಿಚಾರಣೆ ಕಾರ್ಯವಹಿಸಲು ಸೂಚನೆ ನೀಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯ ಮಹೇಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಎಚ್.ಎಂ. ಸೋಮಣ್ಣ, ಅಶೋಕ್, ಸ್ವಾಮಿ, ಶೈಲಜ, ಚಾಮುಲ್ ನಿರ್ದೇಶಕ ಎಚ್.ಎಸ್ ಬಸವರಾಜು, ಜಿಲ್ಲಾ ನೋಡಲ್ ಅಧಿಕಾರಿ ಡಾ. ರಾಜೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಂದರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ವೆಂಕಟಯ್ಯನಛತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಗೋವಿಂದರಾಜು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್ ಮತ್ತು ಇತರರು ಇದ್ದರು.