ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡರಕಳ್ಳಿ ಗ್ರಾಮದಲ್ಲಿ ಡಕ್ ನಿರ್ಮಾಣಕ್ಕೆ ಹಲವರಿಂದ ತೊಂದರೆ ನೀಡುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಗ್ರಾಮಸ್ಥರಾದ ಮಮತಾ ಆರೋಪಿಸಿದರು.
ಗ್ರಾಮದ ಲಿಂಗಾಯತ ಸಮುದಾಯದ ಬಡಾವಣೆಯಲ್ಲಿ ಚರಂಡಿಗೆ ಅಡ್ಡಲಾಗಿ ಡಕ್ ನಿರ್ಮಾಣ ಮಾಡಿದ್ದು, ಸಾಕಷ್ಟು ವರ್ಷಗಳಿಂದ ಹೊಡೆದು ಹೋಗಿದೆ. ಇದರಿಂದಾಗಿ ಚರಂಡಿಯ ನೀರು ರಸ್ತೆ ಬದಿಯಲ್ಲಿ ನಿಂತು ಅವ್ಯವಸ್ಥೆ ತಾಂಡವವಾಡುತ್ತಿದೆ. ಚರಂಡಿಯ ಸಮೀಪದಲ್ಲೇ ಇರುವ ಮನೆಗಳ ಮುಂಭಾಗದಲ್ಲಿ ಕೊಳಚೆ ನೀರು ನಿಂತು ಸಮಸ್ಯೆ ಅನುಭವಿಸುವಂತಾಗಿದೆ. ಈ ಸಂಬಂಧ ಸುಮಾರು 8 ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಬಡಾವಣೆಯ ವ್ಯಾಪ್ತಿಯಲ್ಲಿ ಸುಮಾರು 12 ಮನೆಗಳು ಇದ್ದು, ಬಡಾವಣೆಯ ಒತ್ತುವರಿ ತಡೆಯುವ ನಿಟ್ಟಿನಲ್ಲಿ ರಸ್ತೆಯ ಎರಡು ಬದಿಗಳಲ್ಲೂ ಸಿಸಿ ಚರಂಡಿ ನಿರ್ಮಾಣ ಮಾಡಬೇಕು. ಡಕ್ ಇಲ್ಲದ ಕಾರಣ ಮಳೆಗಾಲದಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಆದರೆ ಡಕ್ ನಿರ್ಮಾಣ ಮಾಡಲು ಗ್ರಾಮಸ್ಥರಲ್ಲೇ ಹಲವರು ತೊಂದರೆ ನೀಡುತ್ತಿದ್ದಾರೆ. ಆಗಾಗಿ ಸಂಬಂಧ ಪಟ್ಟ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಡಕ್ ನಿರ್ಮಾಣಕ್ಕೆ ಕ್ರಮವಹಿಸಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ರತಾಪ್, ಮಹದೇವಯ್ಯ, ಆನಂದ್, ಗುರುಸಿದ್ದಪ್ಪ ಹಾಜರಿದ್ದರು.