ಕೋಲಾರ
ಬಡವರ ಜೀವನಾಡಿಯಾದ ಸಹಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಷಡ್ಯಂತ್ರಗಳನ್ನು ಮೆಟ್ಟಿ ನಿಲ್ಲುವ ಮೂಲಕ ತಕ್ಷಣ ರೈತರಿಗೆ ೪೦ ಕೋಟಿ ರೂ. ಬೆಳೆ ಸಾಲ, ಮಹಿಳಾ ಸಂಘಗಳಿಗೆ ೧೦೦ ಕೋಟಿ ರೂ. ಸಾಲ ಒದಗಿಸಲು ಅಗತ್ಯವಾದ ೮೫ ಕೋಟಿ ಠೇವಣಿ ಸಂಗ್ರಹಿಸುವ ಜವಾಬ್ದಾರಿಯನ್ನು ಬ್ಯಾಂಕ್ ಹಾಗೂ ಪ್ಯಾಕ್ಸ್ಗಳ ಸಿಬ್ಬಂದಿ ಸವಾಲಾಗಿ ಸ್ವೀಕರಿಸಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್,ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಠೇವಣಿ ಸಂಗ್ರಹಣೆ, ಸಾಲ ವಸೂಲಾತಿಯಲ್ಲಿ ಮುಂದಿರುವ ಸವಾಲುಗಳ ಬಗ್ಗೆ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ನಾಳೆಯಿಂದಲೇ ಬ್ಯಾಂಕ್ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಬೇಕು, ಸರ್ಕಾರದ ನಿಲುವು, ತೀರ್ಮಾನ ಏನೇ ಇರಲಿ, ಸಾಲ ವಸೂಲಾತಿ ಮಾಡಿ ಎಂದರು.
ಮಾರ್ಚ್ಗೆ ಮುನ್ನಾ ೪೯೬ ಕೋಟಿ ಇದ್ದ ಠೇವಣಿ ಈಗ ೩೭೧ ಕೋಟಿಗೆ ಇಳಿದಿದೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು, ಸಹಕಾರಿ ವ್ಯವಸ್ಥೆ ಅಸ್ಥಿತ್ವ ಉಳಿಸಿಕೊಳ್ಳಬೇಕು. ನನ್ನ ವಿರುದ್ಧ ೧೦೦ ತನಿಖೆ ನಡೆಸಿದರೂ ಹೆದರೊಲ್ಲ. ಮಾರ್ಚ್ನಲ್ಲಿ ೪ ಕೋಟಿ ಇದ್ದ ವಸೂಲಾತಿ ಈಗ ೧೨ ಕೋಟಿಗೆ ಹೋಗಿದೆ. ಜನರ ಮನಸ್ಥಿತಿ ಬದಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಸಾಲ ವಸೂಲಾತಿ ಕುಂಠಿತವಾಗಬಾರದು. ರೈತರು, ಮಹಿಳೆಯರಿಗೆ ಸಾಲ ಒದಗಿಸಬೇಕಾದರೆ ವಸೂಲಾತಿ ಅತ್ಯಗತ್ಯ. ಸಿಬ್ಬಂದಿ ಇದನ್ನು ನಿಮ್ಮ ಕುಟುಂಬ ಉಳಿಸುವ ಕೆಲಸ ಎಂದು ಭಾವಿಸಿ ಕೆಲಸ ಮಾಡಬೇಕು. ಸಹಕಾರಿ ವ್ಯವಸ್ಥೆ ಸೋತರೆ ಸೊಸೈಟಿಗಳು, ಬ್ಯಾಂಕ್‌ಗೆ ನಷ್ಟ ಮಾತ್ರವಲ್ಲ, ಇದು ಬಡವರ ಜೀವಕ್ಕೆ ಕುತ್ತು ಬಂದಿದೆ ಎಂದೇ ಭಾವಿಸಬೇಕಾಗುತ್ತದೆ. ಬ್ಯಾಂಕಿನಲ್ಲಿ ಯಾರೂ ರಾಜಕೀಯ ತರಬಾರದು. ಈ ಕುರಿತು ಆತ್ಮಾವಲೋಕನದ ಅಗತ್ಯವಿದೆ. ಮೊದಲ ಅವಧಿಯಲ್ಲಿ ನೋವು, ಅವಮಾನ ಎದುರಿಸಿ ದಿವಾಳಿಯಾಗಿದ್ದ ಬ್ಯಾಂಕನ್ನು ಕಟ್ಟಿದ್ದೇವೆ ಎಂದರು.
ಈಗ ಮತ್ತೆ ಬ್ಯಾಂಕ್ ದಿವಾಳಿ ಅಂಚಿಗೆ ನೂಕಲು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಗೆಲುವು ಸಾಧಿಸೋಣ. ಅದಕ್ಕಾಗಿ ಠೇವಣಿ ಸಂಗ್ರಹಿಸಿ, ಮಳೆಗಾಲ ಆರಂಭವಾಗುತ್ತಿದ್ದು ತಕ್ಷಣವೇ ರೈತರಿಗೆ ೪೦ ಕೋಟಿ ಕೆಸಿಸಿ ಸಾಲದ ಬೇಡಿಕೆ ಇದ್ದು ಪೂರೈಸುವ ಮೂಲಕ ಮೂರು ತಿಂಗಳ ಹಿಂದೆ ಇದ್ದ ವೈಭವ ಪುನರಾರಂಭವಾಗಬೇಕು ಎಂದರು.
ಠೇವಣಿ, ವಸೂಲಾತಿಗೆ ೪ ತಂಡ:
ಠೇವಣಿ ಸಂಗ್ರಹ, ಸಾಲ ವಸೂಲಾತಿ ಕುರಿತು ನಿಗಾವಹಿಸಲು ಎಜಿಎಂಗಳಾದ ಶಿವಕುಮಾರ್, ಖಲಿಮುಲ್ಲಾ, ಹುಸೇನ್ ದೊಡ್ಡಮನಿ, ಭಾನುಪ್ರಕಾಶ್ ನೇತೃತ್ವದಲ್ಲಿ ೪ ತಂಡ ರಚಿಸಲಾಗಿದ್ದು, ನಾಳೆಯಿಂದಲೇ ಅವರು ಪ್ರತಿ ಶಾಖೆಗೆ ಹೋಗಿ ಕೆಲಸ ಮಾಡಲಿದ್ದಾರೆ. ಪ್ರತಿ ತಾಲೂಕಿನಿಂದ ೧೦ ರಿಂದ ೧೨ ಕೋಟಿ ಠೇವಣಿ ಸಂಗ್ರಹಿಸಬೇಕಾಗಿದೆ. ಈ ಕಾರ್ಯದಲ್ಲಿಬ್ಯಾಂಕ್ ಸಿಬ್ಬಂದಿ, ಪ್ಯಾಕ್ಸ್ಗಳ ಸಿಇಒ, ಅಧ್ಯಕ್ಷರು ಕೈಜೋಡಿಸಬೇಕು. ಠೇವಣಿ ಸಂಗ್ರಹಿಸಲು ನಾವು ಭಿಕ್ಷÄಕರಾಗಬೇಕು, ಸಾಲ ನೀಡಲು ದಾನಿಗಳಾಗಬೇಕು. ಅಪಪ್ರಚಾರಕ್ಕೆ ಡಿಸಿಸಿ ಬ್ಯಾಂಕ್‌ಅನ್ನು ಬಲಿಕೊಡಬಾರದು, ಬ್ಯಾಂಕನ್ನು ನಂಬಿದವರಲ್ಲಿ ಕಣ್ಣೀರು ತರಿಸುವ ಕೆಲಸ ಮಾಡುವವರ ಕಣ್ಣಲ್ಲಿ ದೇವರು ರಕ್ತ ತರಿಸುವ ಕಾಲ ದೂರವಿಲ್ಲ. ಒಂದು ಸಂಸ್ಥೆ ಉಳಿಸೋದು ಕಷ್ಟ, ಹಾಳು ಮಾಡೋದು ಸುಲಭ ಎಂಬುದನ್ನು ಅರಿತು ಇಚ್ಚಾಶಕ್ತಿಯಿಂದ ಸಿಬ್ಬಂದಿ ಕೆಲಸ ಮಾಡಿ ನೀಡಿರುವ ಗುರಿಯಂತೆ ಠೇವಣಿ ಸಂಗ್ರಹಿಸಿ ನಿಮ್ಮ ಬದ್ದತೆ ಪ್ರದರ್ಶಿಸಿ, ಬ್ಯಾಂಕ್ ಜತೆ ೪.೫ ಲಕ್ಷ ಬಡವರು ಇದ್ದಾರೆ ಎಂದರು.
ರಾಜಕಾರಣಿಗಳ ಹೇಳಿಕೆಗೆ ಆಕ್ರೋಷ:
ಸಭೆಯಲ್ಲಿ ಮಾತನಾಡಿದ ಅವಿಭಜಿತ ಜಿಲ್ಲೆಯ ಸರಿಸುಮಾರು ಪ್ಯಾಕ್ಸ್ಗಳ ಸಿಇಒಗಳು ಸಾಲ ವಸೂಲಾತಿಯಲ್ಲಿ ಆಗಿರುವ ಅಡಚಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ಕುರಿತು ನೀಡಿರುವ ಹೇಳಿಕೆಗಳೇ ಕಾರಣ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕಸಬಾ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ್,ಸಿಇಒ ವೆಂಕಟೇಶ್ ಮಾತನಾಡಿ, ಮಾರ್ಚ್ವರೆಗೂ ಶೇ.೧೦೦ ವಸೂಲಾತಿ ಸಾಧನೆ ಮಾಡಿದ್ದೇವೆ, ಚುನಾವಣೆ ನಂತರ ತೊಂದರೆಯಾಗಿದೆ,ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತಿತರ ರಾಜಕಾರಣಿಗಳ ಹೇಳಿಕೆಗಳಿಂದ ಸಹಕಾರಿ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಸೊಸೈಟಿಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬೇತಮಂಗಲ, ಹುದುಕುಳ,ದಳಸನೂರು ಸೊಸೈಟಿ ಸಿಇಒಗಳು ಮಾತನಾಡಿ, ಮಾರ್ಚ್ವರೆಗೂ ಸಾಲ ವಸೂಲಿಯಲ್ಲಿ ಸಮಸ್ಯೆಯೇ ಇರಲಿಲ್ಲ, ಸಿದ್ದರಾಮಯ್ಯ ಚುನಾವಣೆಗೆ ಮೊದಲು ನೀಡಿದ ಹೇಳಿಕೆ, ಸಿಎಂ ಆದ ನಂತರ ಮುಂದಿನ ವರ್ಷ ಸಾಲ ಮನ್ನಾ ಮಾಡುವ ಕುರಿತು ನೀಡಿದ ಹೇಳಿಕೆಗಳಿಂದ ಮಹಿಳೆಯರು ಸಾಲ ವಸೂಲಾತಿಗೆ ಹೋದರೆ ೩-೪ ತಿಂಗಳು ಇರಿ ನೋಡೋಣ ನಂತರ ಸಾಲ ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.
ಯಲ್ದೂರು ಸೊಸೈಟಿಯ ಪ್ರಭಾಕರರೆಡ್ಡಿ, ರಾಜಕಾರಣಿಗಳಿಂದಲೇ ಸಾಲ ವಸೂಲಾತಿ ಸಮಸ್ಯೆ ಎದುರಾಗಿದೆ,ಶೇ.೧೦೦ ಇದ್ದ ವಸೂಲಾತಿ ಈಗ ಶೇ.೪೦ಕ್ಕೆ ಇಳಿದಿದೆ, ದಯಮಾಡಿ ಸಹಕಾರ ಸಚಿವರನ್ನು ಕರೆಸಿ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಬೇಧ ಮರೆತು ಸಾಲ ಮನ್ನಾ ಮಾಡಲ್ಲ, ಮಹಿಳೆಯರು ಸಾಲ ಮರುಪಾವತಿಸಿ ಎಂದು ಹೇಳುವಂತೆ ವಿಚಾರ ಸಂಕಿರಣ ನಡೆಸಿ ಎಂದು ಕೋರಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ಹನುಮಂತರೆಡ್ಡಿ, ಕೆ.ವಿ.ದಯಾನಂದ್, ಗುಡಿಯಪ್ಪ, ವೆಂಕಟರೆಡ್ಡಿ, ನಾಗಿರೆಡ್ಡಿ, ಹೆಚ್.ವಿ.ನಾಗರಾಜ್, ಚೆನ್ನರಾಯಪ್ಪ, ಮಂಜುನಾಥರೆಡ್ಡಿ, ವೃತ್ತಿಪರ ನಿರ್ದೇಶಕ ಇಲಿಯಾಸ್‌ಖಾನ್, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರೂ ಹಾಗು ಡಿಎಆರ್ ಬಿ.ಜಿ.ಮಂಜುಳಾ, ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ದೊಡ್ಡಮನಿ, ಭಾನುಪ್ರಕಾಶ್ ಮತ್ತಿತರರಿದ್ದರು.