ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯ ಕಷ್ಣಾ ನದಿ ಸೇತುವೆ ತಿರುವಿನಲ್ಲಿ ಚಿಂಚಲಿ ಮಾಯಕ್ಕದೇವಿ ದರ್ಶನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಯುವತಿ ಮೃತಪಟ್ಟು, 11 ಜನ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ತಾಲೂಕಿನ ಕಕಮರಿ ಗ್ರಾಮದ ಅಕ್ಷತಾ ಸಂತೋಷ ಕನಮಡಿ (20) ಮೃತ ಯುವತಿ. ಕಕಮರಿ ಗ್ರಾಮದಿಂದ ಎರಡು ಟ್ರಾಲಿ ಹೊಂದಿದ್ದ ಟ್ರ್ಯಾಕ್ಟರ್‌ನಲ್ಲಿ 30 ಜನರನ್ನು ಹೇರಿಕೊಂಡು ಅಥಣಿ, ಹಲ್ಯಾಳ ಗ್ರಾಮದ ಮಾರ್ಗವಾಗಿ ಚಿಂಚಲಿ ಗ್ರಾಮದ ಮಾಯಕ್ಕದೇವಿ ದರ್ಶನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
11 ಜನರು ಗಂಭೀರ ಗಾಯಗೊಂಡಿದ್ದು, ಅಥಣಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 19 ಜನರು ಸುರಕ್ಷಿತವಾಗಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಅಥಣಿ ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಶಿವಶಂಕರ ಮುಕರಿ, ತನಿಖಾಸಹಾಯಕರಾದ ಭೀಮಸೇನ ಮನ್ನಾಪುರ ಹಾಗೂ ಪ್ರಕಾಶ ಕುರಿ ಭೇಟಿ ನೀಡಿ ಪರಿಶೀಲಿಸಿದರು.