ಜಿಲ್ಲೆ

ಟ್ರೋಫಿ ಬಾಚಿದ ಗಜಾನನ ಕ್ಲಬ್

ಬೀದರ್: ಕೇಂದ್ರ ಸಚಿವ ದಿ.ಅನಂತಕುಮಾರ್ ಅವರ ಸವಿನೆನಪಿನಲ್ಲಿ ಅಜಯ್ ಕ್ರಿಕೆಟ್ ಕ್ಲಬ್ ನಿಂದ ಕಮಠಾಣ ಹತ್ತಿರದ ಪಶು ವೈದ್ಯಕೀಯ ವಿಶ್ವದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಲೆದರ್ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಗಜಾನನ ಕ್ರಿಕೆಟ್ ಕ್ಲಬ್ ಪ್ರಶಸ್ತಿ ಬಾಚಿಕೊಂಡಿದೆ.

ಆರು ದಿನದ ಟೂರ್ನಿಯಲ್ಲಿ ವಿವಿಧೆಡೆಯ 10 ತಂಡಗಳು ಪಾಲ್ಗೊಂಡಿದ್ದವು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅಜಯ್ ಕ್ರಿಕೆಟ್ ಕ್ಲಬ್ ಹಾಗೂ ಗಜಾನನ ಕ್ರಿಕೆಟ್ ಕ್ಲಬ್ ಮಧ್ಯೆ ಹಣಾಹಣಿ ನಡೆಯಿತು. ಮೊದಲು ಬ್ಯಾಟ್ ಮಾಡಿದ ಗಜಾನನ ಕ್ಲಬ್ ನಿಗದಿತ 20 ಓವರ್‌ಗಳಲ್ಲಿ 129 ರನ್ ಬಾರಿಸಿತು. ನಂತರ ಬ್ಯಾಟಿಂಗ್ ಮಾಡಿದ ಅಜಯ ಕ್ಲಬ್ ಕೇವಲ 84 ರನ್ ಗಳಿಸಿ ಆಲೌಟ್ ಆಯಿತು.

ಸಮಾರೋಪದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ವಿನ್ನರ್ ತಂಡ ಗಜಾನನ ಕ್ಲಬ್‌ಗೆ ಟ್ರೋಫಿಯ ಜತೆಗೆ 10 ಸಾವಿರ ರೂ. ಮತ್ತು ರನ್ನರ್ ತಂಡ ಅಜಯ್ ಕ್ಲಬ್‌ಗೆ ಟ್ರೋಫಿ ಹಾಗೂ 7 ಸಾವಿರ ರೂ. ನಗದು ಬಹುಮಾನ ವಿತರಿಸಲಾಯಿತು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಮುಖಂಡರಾದ ಕುಶಾಲ ಪಾಟೀಲ್ ಗಾದಗಿ, ಡಾ.ಅಮರ ಎರೋಳಕರ್, ಬಸವರಾಜ ಜೋಜನಾ, ಆಯೋಜಕ ರಾಜು ಬಿರಾದಾರ ಇತರರಿದ್ದರು.