ಜಿಲ್ಲೆ

ಟ್ರೀ ಕೋರ್ಟ್ ರಚನೆಗೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

ಮೈಸೂರು: ಮರಗಳ ಹನನ ತಡೆಯಲು ಟ್ರೀ ಕೋರ್ಟ್ ರಚನೆ ಮಾಡಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು

ಈಗ ಟ್ರೀ ಕೋರ್ಟ್ ಇಲ್ಲ. ಇದರಿಂದಾಗಿ ಎಗ್ಗಿಲ್ಲದೇ ಮರ ಕಡಿಯುವುದು ನಡೆದಿದೆ. ಹೀಗಾಗಿ ಕೂಡಲೇ ಈ ಕ್ರಮ ತೆಗೆದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇತ್ತೀಚಿನ ವರ್ಷಗಳಲ್ಲಿ ಮರಗಳನ್ನು ಎಗ್ಗಿಲ್ಲದೆ ಕಡಿಯುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಅತಿವೃಷ್ಟಿ-ಅನವೃಷ್ಟಿ, ಭೂಕಂಪ, ಸುನಾಮಿ ಇತ್ಯಾದಿ ಪ್ರಾಕೃತಿಕ ಅವಘಡಗಳು ಮೇಲಿಂದ ಮೇಲೆ ಸಂಭವಿಸುತ್ತಿದೆ.

ಕರ್ನಾಟಕ ಸಂಪದ್ಭರಿತ ರಾಜ್ಯವಾಗಿತ್ತು. ಇಂದು ಎಲ್ಲವನ್ನೂ ಧ್ವಂಸ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ ಎಂದರು

ಪರಿಸರ ಸಂರಕ್ಷಣೆ ಒಂದು ಕನಸು ಎಂದು ಭಾವಿಸಿಕೊಳ್ಳುವ ಅಗತ್ಯವಿಲ್ಲ. ಆದರೆ, ಕಾಲದ ಒತ್ತಡವು ಅವ್ಯವಸ್ಥೆಯನ್ನು ಸುವ್ಯವಸ್ಥೆ ಕಡೆಗೆ ಸಾಗಿಸುತ್ತಿದೆ. ಆದ್ದರಿಂದ ಯಾರೂ ನಿರಾಸೆ ಆಗುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಆಳುವ ಸರ್ಕಾರಗಳಿಗೆ ಬೇಕೊ ಬೇಡವೋ ಎಂಬುದು ಮುಖ್ಯವಲ್ಲ. ಆದರೆ, ನಾಗರಿಕ ಸಮುದಾಯ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ದೇಶದ ಜನತೆ ಮುಗ್ಧರು. ಆದ್ದರಿಂದ ಮರ, ನೀರು ಎಲ್ಲವನ್ನೂ ಪೂಜಿಸಲಾಗುತ್ತದೆ. ಸರ್ಕಾರ ಜನರನ್ನು ಮೆಚ್ಚಿಸಲು ನದಿಗಳಿಗೆ ಬಾಗಿನ ಅರ್ಪಿಸುವ, ಪೂಜಿಸುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿದೆ.

ಪೂಜೆಯಿಂದ ನದಿಗಳ ಪಾವಿತ್ರೃತೆಯನ್ನು ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಪರಿಹಾರವನ್ನು ರಕ್ಷಿಸುವ ಮತ್ತು ಸ್ವಚ್ಛವಾಗಿ ಇಡುವ ಮೂಲಕ ಒಟ್ಟಾರೆ ಪರಿಸರದ ಪಾವಿತ್ರೃತೆ ಕಾಪಾಡಬೇಕು ಎಂದು ತಿಳಿಸಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ರಾಜ್ಯ ಕಾರ್ಯದರ್ಶಿ ಗಂಟಯ್ಯ, ಪರಿಸರವಾದಿಗಳಾದ ಲೀಲಾ ವೆಂಕಟೇಶ್, ಅಂಜನಾ ಮಲ್ಲೇಶ್, ಕಮಲ್ ಗೋಪಿನಾಥ್ ಇದ್ದರು