ಜಿಲ್ಲೆ

ಟ್ರಾೃಕ್ಟರ್ ಜಾಥಾಕ್ಕೆ ನಿರ್ಬಂಧ -70ಕ್ಕೂ ಹೆಚ್ಚು ರೈತ ಮುಖಂಡರ ಬಂಧನ -ಭದ್ರಾ ನೀರಿಗಾಗಿ ಶೀಘ್ರ ದಾವಣಗೆರೆ ಬಂದ್?

ಡಿ. ಎಂ. ಮಹೇಶ್

ದಾವಣಗೆರೆ: ಭದ್ರಾ ನೀರಿಗಾಗಿ ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ಅಡಿಯಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ರೂಪವಾಗಿ ನಡೆಸಲು ಉದ್ದೇಶಿಸಿದ್ದ ಟ್ರಾೃಕ್ಟರ್ ಜಾಥಾಕ್ಕೆ ಪೊಲೀಸರು ಆರಂಭದಲ್ಲೇ ನಿರ್ಬಂಧಿಸಿದರು.

ಮುಂಜಾಗ್ರತಾ ಕ್ರಮವಾಗಿ 70ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಇರಿಸಿ ಸಂಜೆ ಬಿಡುಗಡೆಗೊಳಿಸಿದರು.

ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಟ್ರಾೃಕ್ಟರ್‌ಗಳೊಂದಿಗೆ ರೈತರು ಜಮಾಯಿಸಿದ್ದರು. ಭದ್ರಾ ಅಚ್ಚುಕಟ್ಟಿನ ಬೆಳೆಗಳ ಉಳಿವಿಗಾಗಿ ನೀರು ಹರಿಸಲು ಆಗ್ರಹಿಸಿ ಕೆಲವು ದಿನಗಳಿಂದ ನಿರಂತರ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾಡಳಿತ ಸರ್ಕಾರಕ್ಕೆ ಸರಿಯಾಗಿ ಮನವರಿಕೆ ಮಾಡಿಲ್ಲ. ಸರ್ಕಾರ ಕೂಡ ಭದ್ರಾ ಅಚ್ಚುಕಟ್ಟುದಾರರನ್ನು ನಿರ್ಲಕ್ಷಿಸಿದೆ ಎಂದು ಕಿಡಿ ಕಾರಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಉದ್ದೇಶಿತ ಜಾಥಾದ ಮಾರ್ಗವನ್ನು ಆಗಾಗ್ಗೆ ತಿಳಿದುಕೊಂಡ ಪೊಲೀಸರು, ಜಾಥಾ ಹೊರಡಲು ಸಿದ್ಧವಾಗುತ್ತಿದ್ದಂತೆ ತಡೆಯೊಡ್ಡಿದರು. ಜಾಥಾ ಕೈಬಿಡುವಂತೆ ಮನವಿ ಮಾಡಿದಾಗ ರೈತರು ನಮಗೆ ನೀರು ಕೊಡಿಸಿ, ಪ್ರತಿಭಟನೆ ಕೈಬಿಡುತ್ತೇವೆ, ಎರಡು ದಿನದ ಹಿಂದೆಯೇ ಜಾಥಾ ನಡೆಸುವ ಬಗ್ಗೆ ಮಾಹಿತಿ ನೀಡಿದ್ದರೂ ಅಡ್ಡಿಪಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟ್ರಾೃಕ್ಟರ್ ಸಂಚಾರ ನಿರ್ಬಂಧಿಸಿದಾಗ ಕೆಲ ರೈತರು ರಸ್ತೆಯಲ್ಲೇ ಕೂರೋಣ ಎಂದು ಹೊರಡಲು ಸಿದ್ಧರಾದರು. ಆಗ ಪೊಲೀಸರು ದೇವಸ್ಥಾನ ಆವರಣದ ಕಬ್ಬಿಣದ ಗೇಟು ಹಾಕಿ ತಡೆದರು. ನಂತರ ಸಶಸ್ತ್ರ ಮೀಸಲುಪಡೆ ವಾಹನವನ್ನೂ ಅಡ್ಡವಿರಿಸಿ ರೈತರನ್ನು ಸುತ್ತುವರಿದರು. ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ವಾಹನಗಳಲ್ಲಿ ಕರೆದೊಯ್ದಗ ಪೊಲೀಸರಿಗೂ ಧಿಕ್ಕಾರ ಕೇಳಿಬಂತು.

ಬೆಳವನೂರು ನಾಗೇಶ್ವರರಾವ್, ಶಾಮನೂರು ಎಚ್.ಆರ್.ಲಿಂಗರಾಜ್, ಕೊಳೇನಹಳ್ಳಿ ಬಿ.ಎಂ.ಸತೀಶ್, ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್, ಎಚ್.ಎನ್. ಗುರುನಾಥ್, ಕುಂದುವಾಡ ಗಣೇಶಪ್ಪ, ಹನುಮಂತಪ್ಪ, ಹೊಸ ಕುಂದುವಾಡ ಮಹೇಶ್ವರಪ್ಪ, ಅಗಸನಕಟ್ಟೆ ಅಣ್ಣಪ್ಪ, ಗುರು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರದ ಮೌನ ನಡೆಗೆ ಬೇಸರಗೊಂಡಿರುವ ರೈತರು ಒಂದೆರಡು ದಿನ ಕಾಲಾವಕಾಶ ನೀಡಿ, ನಂತರದಲ್ಲಿ ದಾವಣಗೆರೆ ಬಂದ್ ನಡೆಸುವ ಇರಾದೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.