ಜಿಲ್ಲೆ

ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೆಷನ್ ಸೆಂಟರ್ ಉದ್ಘಾಟಿಸಿದ ಎಸ್‌ಪಿ ಹರಿರಾಂ ಶಂಕರ್

ಹಾಸನ: ಸಂಚಾರಿ ಪೊಲೀಸರು ರಸ್ತೆ ಬದಿಯಲ್ಲಿ ನಿಂತು ವಾಹನ ಸವಾರರನ್ನು ತಡೆದು ದಂಡ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ. ಇನ್ನು ಮುಂದೆ ಸಂಚಾರಿ ಪೊಲೀಸರು ಸ್ಥಳದಲ್ಲಿ ನಿಂತು ಸವಾರರನ್ನು ತಡೆದು ತಪಾಸಣೆ ಮಾಡುವ ಬದಲಿಗೆ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಚಿತ್ರ ಕ್ಲಿಕ್ಕಿಸಿ ಸವಾರರಿಗೆ ದಂಡ ವಿಧಿಸುವ ಹೊಸ ತಂತ್ರಾಂಶವನ್ನು ಅಳವಡಿಸಿಕೊಂಡಿದೆ.

ಹಾಸನ ನಗರ ಸಂಚಾರ ಠಾಣೆಯಲ್ಲಿ ಸೋಮವಾರ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೆಷನ್ ಸೆಂಟರ್ (ಟಿಇಎಸಿ) ಉದ್ಘಾಟಿಸಿ ಮಾತನಾಡಿದ ಎಸ್‌ಪಿ ಹರಿರಾಂ ಶಂಕರ್ ಅವರು, ಹಾಸನದಲ್ಲಿ ಸಂಚಾರಿ ಪೊಲೀಸರ ಕೊರತೆ ಇದೆ. ಅವಶ್ಯಕತೆಗೆ ತಕ್ಕಷ್ಟು ಸಂಚಾರಿ ಪೊಲೀಸರು ಇಲ್ಲ. ವಾಹನಗಳ ಓಡಾಟ ಹೆಚ್ಚಾಗಿದೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಹೊಸ ತಂತ್ರಾಂಶವನ್ನು ಹಾಸನ ನಗರದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದು ಹೇಳಿದರು.

ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವುದು, ನಂಬರ್ ಪ್ಲೇಟ್ ಸರಿ ಇಲ್ಲದೆ ಇರುವುದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಸೇರಿ ಇತರೆ ಸಂಚಾರಿ ನಿಯಮ ಉಲ್ಲಂಘಿಸಿದರೆ ಸ್ಥಳದಲ್ಲಿ ಇರುವ ಪೊಲೀಸರು ಆ ವಾಹನದ ಫೋಟೋ ಕ್ಲಿಕ್ಕಿಸಿ ಟಿಇಎಸಿ ಸಾಫ್ಟ್‌ವೇರ್‌ಗೆ ಮಾಹಿತಿ ಕಳುಹಿಸುತ್ತಾರೆ. ಅಲ್ಲಿ ನಂತರ ದಂಡದ ರಸೀದಿಯನ್ನು ಪೋಸ್ಟ್ ಮೂಲಕ ಮನೆಗೆ ತಲುಪಿಸಲಾಗುತ್ತದೆ. ಆನಂತರ ದಂಡವನ್ನು ಎನ್‌ಫೋರ್ಸ್‌ಮೆಂಟ್ ಆಟೋಮೆಷನ್ ಸೆಂಟರ್- ಹಾಸನ ಸಂಚಾರಿ ಠಾಣೆ. ಅಥವಾ ಕರ್ನಾಟಕ ಒನ್ ಸೆಂಟರ್‌ನಲ್ಲಿ ದಂಡ ಪಾವತಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ಸಂಚಾರಿ ಪೊಲೀಸರು ಸ್ಥಳದಲ್ಲಿ ನಿಂತು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತಿದ್ದವು. ಅಪಘಾತಗಳು ಸಂಭವಿಸುತ್ತಿದ್ದವು ಅಲ್ಲದೇ, ಕೆಲ ಪೊಲೀಸರು ಜನರಿಂದ ಹಣ ಪಡೆಯುತ್ತಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈಗ ಈ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಇನ್ನು ಮುಂದೆ ಪೊಲೀಸರು ಸ್ಥಳದಲ್ಲಿ ನಿಂತು ವಾಹನ ತಪಾಸಣೆ ಮಾಡುವುದಿಲ್ಲ. ಬದಲಿಗೆ ಫೋಟೋ ತೆಗೆದು ದಂಡ ಹಾಕಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಎಎಪಿ ತಮ್ಮಯ್ಯ ಹಾಗೂ ಡಿವೈಎಸ್‌ಪಿ ಪಿ.ಕೆ. ಮುರುಳೀಧರ್ ಅವರು ಹಾಜರಿದ್ದರು.