ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿ ಕಾರೆಹಳ್ಳಿ ಬಳಿ ಚನ್ನರಾಯಪಟ್ಟಣ - ತಿಪಟೂರು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಕೆಟ್ಟು ನಿಂತಿದ್ದ ಟ್ಯಾಕ್ಟರ್‌ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಯೋಗೇಶಾಚಾರಿ (35), ಆತನ ಪತ್ನಿ ಲಕ್ಷ್ಮೀ (27), ಯೋಗೇಶಾಚಾರಿಯ ತಂಗಿಯ ಮಕ್ಕಳಾದ ಗಾನವಿ (11) ಮತ್ತು ಲೇಖನಾ (6) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯಾವುದೇ ನೋಂದಣಿ ಸಂಖ್ಯೆ ಇಲ್ಲದ ಟ್ರಾೃಕ್ಟರ್ ಮತ್ತು ಟ್ರೈಲರ್ ಅನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ಹೋಗಿದ್ದು, ಬಾಗೂರು ಹೋಬಳಿ ನವಿಲೆಗೇಟ್ ಗ್ರಾಮದ ವಾಸಿ ಯೋಗೇಶಾಚಾರಿಯ ದ್ವಿಚಕ್ರ ವಾಹನದಲ್ಲಿ ತನ್ನ ಪತ್ನಿ ಮತ್ತು ತಂಗಿಯ ಮಕ್ಕಳೊಂದಿಗೆ ಹೊಸೂರು ಗ್ರಾಮಕ್ಕೆ ಹೋಗಿ ರಾತ್ರಿ ಹಿಂದಿರುಗುತ್ತಿದ್ದಾಗ ರಸ್ತೆ ಮಧ್ಯೆಯೇ ಟ್ರಾಕ್ಟರ್ ನಿಂತಿದ್ದು ಕಾಣದೆ ಡಿಕ್ಕಿ ಹೊಡೆದ ಕಾರಣ ಈ ದುರಂತ ಸಂಭವಿಸಿದೆ.
ಮಕ್ಕಳಿಲ್ಲದ ಯೋಗೇಶಾಚಾರಿಯು ತನ್ನ ತಂಗಿ ಸುಧಾಳ ಇಬ್ಬರು ಹೆಣ್ಣು ಮಕ್ಕಳನ್ನು ಕರೆತಂದು ಸಾಕಿಕೊಂಡಿದ್ದನು ಎನ್ನಲಾಗಿದೆ. ಟ್ರಾೃಕ್ಟರ್ ಚಾಲಕನ ಬೇಜವಾಬ್ದಾರಿಗೆ ಅಮಾಯಕ ಕುಟುಂಬ ಬಲಿ ಆದಂತಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದರು. ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.