ಚನ್ನರಾಯಪಟ್ಟಣ: ಡಿ.ಕಾಳೇನಹಳ್ಳಿ ಗ್ರಾಮವು ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಮೈಸೂರು ರಸ್ತೆಯಿಂದ ಡಿ.ಕಾಳೇನಹಳ್ಳಿ ವರೆಗಿನ ರಸ್ತೆ ಕಾಮಗಾರಿಗೆ 99 ಲಕ್ಷ ರೂ. ಮಂಜೂರಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಡಿ.ಕಾಳೆನಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮೆಷಿನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹೇಮಾವತಿ ನದಿ ನೀರನ್ನು ಸಂಸ್ಕರಿಸಿ ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತದೆ ಎಂದರು.
ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ಕಾಂಕ್ಷಿ ಯೋಜನೆ ಇದಾಗಿದೆ. ಡಿ ಕಾಳೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಜಲ ಜೀವನ್ ಮೆಷಿನ್ ಯೋಜನೆಯಡಿ 8.7 ಕೋಟಿ ರೂ. ವೆಚ್ಚದಲ್ಲಿ 8 ಓವರ್ ಹೆಡ್ ಟ್ಯಾಂಕ್‌ಗಳು ಮಂಜೂರಾಗಿವೆ. ಹಳ್ಳಿಗಳಲ್ಲಿ ಜನಸಂಖ್ಯೆ ಆಧಾರದ ಮೇಲೆ 25 ಸಾವಿರ ದಿಂದ 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕುಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಂದಿನ 3-4 ತಿಂಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಪೂರ್ಣಗೊಳ್ಳಲಿದ್ದು ತಕ್ಷಣದಿಂದಲೇ 1104 ಮನೆಗಳಿಗೆ ನಲ್ಲಿ ಅಳವಡಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ. ಈ ಯೋಜನೆಯಿಂದ ಪ್ರತಿ ಮನೆಗೂ ಶುದ್ಧವಾದ ಕುಡಿಯುವ ನೀರು ಲಭ್ಯವಾಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನಾದ್ಯಂತ 5 ಲಕ್ಷ ಲೀಟರ್ ಸಾಮರ್ಥ್ಯದ ನಾಲ್ಕುಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ನಳಿನ, ಸಹಾಯಕ ಇಂಜಿನಿಯರ್ ವೆಂಕಟೇಶ್, ಪಿಡಿಒ ನವೀನ್, ಗಿರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಪುಟ್ಟರಾಜು, ಉಪಾಧ್ಯಕ್ಷ, ಸದಸ್ಯರುಗಳು, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜಣ್ಣ, ಮುಖಂಡರಾದ ರಾಮಕೃಷ್ಣ, ಸೋಮಣ್ಣ, ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಆನಂದ್ ಕಾಳೆನಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.