ಜಿಲ್ಲೆ

ಟ್ಯಾಂಕರ್ ನೀರು ಪೂರೈಕೆ ಸ್ಥಗಿತ ವಿರೋಧಿಸಿ ಚಿಂತಾಮಣಿ ನಗರಸಭೆ ಸದಸ್ಯರಿಂದ ಧರಣಿ

Chikkaballapur

ಚಿಂತಾಮಣಿ: ನಗರದ ವಿವಿಧ ವಾರ್ಡ್‌ಗಳಿಗೆ ಟ್ಯಾಂಕರ್ ನೀರು ಪೂರೈಕೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ, 14 ಮಂದಿ ನಗರಸಭೆ ಸದಸ್ಯರು ನಗರಸಭೆ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

ವಾರ್ಡ್‌ಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದ್ದು, ಸಮಸ್ಯೆ ನೀಗಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡಿಲ್ಲ. ಕೋಟ್ಯಂತರ ರೂ. ಉಳಿಸಿಕೊಂಡಿರುವುದರಿಂದ ನೀರು ಪೂರೈಕೆ ನಿಂತಿದೆ. ಪರ್ಯಾಯ ವ್ಯವಸ್ಥೆ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಸದಸ್ಯರು ಕಿಡಿಕಾರಿದರು.

ಪೌರಾಯುಕ್ತ ಮತ್ತು ಎಇಇ ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಬದಲು ರಾಜಕಾರಣ ಮಾಡುತ್ತಿದ್ದಾರೆ. ನೀರು ಪೂರೈಕೆಯ ಗುತ್ತಿಗೆದಾರ ಅವ್ಯವಹಾರ ನಡೆಸಿರುವ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಆರ್‌ಎಫ್ ಯೋಜನೆಯಡಿ ಬಿಡುಗಡೆಯಾದ ಹಣದಲ್ಲಿ ಕೊಳವೆ ಬಾವಿಗಳ ರೀ ಡ್ರಿಲ್ಲಿಂಗ್ ಇಲ್ಲವೇ ಹೊಸದಾಗಿ ಕೊಳವೆ ಬಾವಿ ಕೊರೆಸಿಲ್ಲ. ಆಹ್ವಾನಿಸಿದ ಟೆಂಡರ್‌ಗೂ ಅನುಮೋದನೆ ಕೊಟ್ಟಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಅಗಮಿಸಿದ ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಮತ್ತು ನಗರಠಾಣೆ ಇನ್‌ಸ್ಪೆಕ್ಟರ್ ಜೆ.ಎ.ಅನಂದ್ ಕುಮಾರ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಕೊನೆಗೆ ಪೌರಾಯುಕ್ತ ಹರೀಶ್ ಮತ್ತು ಎಇಇ ಪದ್ಮನಾಭರೆಡ್ಡಿ ಭರವಸೆ ನೀಡಿದರೂ ಜಗ್ಗಲಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟುಹಿಡಿದು ಧರಣಿ ಮುಂದುವರೆಸಿದರು.

ನಗರಸಭೆ ಸದಸ್ಯರಾದ ಕಲಾವತಿ, ಎಂ.ರೇಖಾ ಉಮೇಶ್, ಪಿ.ಮುನಿರಾಜು, ಆರ್.ಜಗನ್ನಾಥ್, ಇ.ಒ.ರೆಡ್ಡಪ್ಪ, ಎಸ್.ಬಿಂಧು, ಡಿ.ಎನ್.ಸುಹಾಸಿನಿ, ರುಬಿಯಾ ಸುಲ್ತಾನ್ ಅಲ್ಲಾಬಕಷ್, ಎಂ.ಪಿ.ಗೀತಾ, ಚೌಡ ರೆಡ್ಡಿಪಾಳ್ಯ ಎಂ.ಹರೀಶ್, ಎಂ.ಜಗದೀಶ್, ಶ್ರೀರಾಮನಗರ ಜಿ.ಎನ್.ಸುಮಿತ್ರಾ, ಶಾಂತಿನಗರ ಕೆ.ರಾಣಿ ಇತರರಿದ್ದರು.