ಕೋಲಾರ: ಟೊಮ್ಯಾಟೊ ಹಾಗೂ ಮಾವು ಬೆಳೆಗಳಿಗೆ ಪ್ರತಿ ಕೆಜಿಗೆ 10 ರೂ. ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಬುಧವಾರ ರೈತ ಸಂಘದಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಟೊಮ್ಯಾಟೊ ಮತ್ತು ಮಾವು ಸುರಿದು ಪ್ರತಿಭಟನೆ ನಡೆಸಲಾಯಿತು.
ಕೃಷಿ, ತೋಟಗಾರಿಕೆ ಸಚಿವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಎರಡೂ ಇಲಾಖೆಯ ಸಚಿವರು ನಾಪತ್ತೆಯಾಗಿದ್ದಾರೆ. ಜಿಲ್ಲೆಗೆ ಮೂರು ತಿಂಗಳಿಗೆ ಒಬ್ಬ ಉಸ್ತುವಾರಿ ಸಚಿವರನ್ನು ಬದಲಿಸುವ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಕರೊನಾ ಎರಡನೇ ಅಲೆಯಿಂದಾಗಿ ಜಿಲ್ಲೆಯಲ್ಲಿ ಟೊಮ್ಯಾಟೊ ಹಾಗೂ ಮಾವು ಬೆಳೆಗಾರರ ಬದುಕು ಛಿದ್ರವಾಗಿದೆ. ಲಕ್ಷಾಂತರ ರೂ. ಖಾಸಗಿ ಸಾಲ ಮಾಡಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ಸಮೃದ್ಧವಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದೆ ರಸ್ತೆಗೆ ಸುರಿಯಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕೃಷಿ-ತೋಟಗಾರಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಉಪಾಧ್ಯಕ್ಷ ಕೆ. ನಾರಾಯಣಗೌಡ ಆರೋಪಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಕರೊನಾ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಹಣ್ಣು, ತರಕಾರಿಗೆ ಹೆಕ್ಟೇರ್‌ಗೆ 10,000 ರೂ. ಘೋಷಿಸಿ ಕೈತೊಳೆದುಕೊಂಡಿದೆ. ಈ ಪರಿಹಾರದಲ್ಲಿ ಮಾವು ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಒಂದು ವಾರದೊಳಗೆ ಟೊಮ್ಯಾಟೊ, ಮಾವು ಬೆಳೆಗಳ ನಷ್ಟದ ಬಗ್ಗೆ ಸಮರ್ಪಕ ಮಾಹಿತಿ ಪಡೆಯಲು ಸರ್ಕಾರ ವಿಶೇಷ ತಂಡ ರಚನೆ ಮಾಡುವ ಜತೆಗೆ ಪ್ರತಿ ಕೆಜಿಗೆ 10 ರೂಪಾಯಿ ಬೆಂಬಲ ಬೆಲೆ ನೀಡಬೇಕು. ಇಲ್ಲವಾದಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಟೊಮ್ಯಾಟೊ, ಮಾವು ಸಮೇತ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಬೇಕಾದೀತು ಎಂದು ಎಚ್ಚರಿಸಿ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಹೇಮಲತಾಗೆ ಮನವಿ ಸಲ್ಲಿಸಿದರು.
ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ಕಲೇರಿ ಹನುಮಯ್ಯ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಅದ ತೆರ‌್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ತೆರ‌್ನಹಳ್ಳಿ ವೆಂಕಟೇಶಪ್ಪ, ಯಲ್ಲಪ್ಪ ಹರೀಶ್ ಇದ್ದರು.