ಜಿಲ್ಲೆ

ಟೊಮ್ಯಾಟೊ ದರ ದಿಢೀರ್ ಕುಸಿತ

ಚಿಕ್ಕಮಗಳೂರು: ಇಪ್ಪತ್ತು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಗೆ ಕೃಷಿಕರ ಬದುಕು ನಲುಗಿಹೋಗಿದೆ. ನೂರಾರು ಎಕರೆ ಟೊಮ್ಯಾಟೊ ಹೊಲದಲ್ಲೇ ಕೊಳೆಯುತ್ತಿದ್ದು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಬಯಲುಸೀಮೆ ಹಳ್ಳಿಗಳಿಗೆ ಕಾಲಿಟ್ಟರೆ ಹೊಲಗಳ ತುಂಬ ಟೊಮ್ಯಾಟೊ. ಮೂರು ತಿಂಗಳ ಹಿಂದೆ ಒಂದು ಕೆಜಿಗೆ ಶತಕದ ಗಡಿ ದಾಟಿದ್ದ ದರವನ್ನು ಕಂಡು ಜಿಲ್ಲೆಯ ಬಯಲು ಭಾಗದಲ್ಲಿ ನೂರಾರು ರೈತರು ಟೊಮ್ಯಾಟೊ ಬಿತ್ತಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು.

ಮುಂಗಾರು ಆರಂಭವಾಗುತ್ತಿದ್ದಂತೆ ಕೆಲವರು ಕಟಾವಿಗೆ ಬಂದಿದ್ದ ಹಣ್ಣು ಮಾರಾಟ ಮಾಡಿದ್ದರು. 20 ದಿನಗಳ ಹಿಂದೆ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ಗಿಡದಲ್ಲಿ ಬೆಳೆದು ನಿಂತಿದ್ದ ಹಣ್ಣು ಉದುರುತ್ತಿದೆ. ಗುಣಮಟ್ಟ ಕಳೆದುಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಬಯಲುಸೀಮೆಯ ಲಕ್ಯಾ, ಗಾಣದಾಳು, ಕಣಿವೆಹಳ್ಳಿ, ಕ್ಯಾತನಬೀಡು, ದೇವರಹಳ್ಳಿ, ಹಿರೇಗೌಜ, ಚಿಕ್ಕಗೌಜ, ಕೆಂಗೇನಹಳ್ಳಿ, ಸಾದರಹಳ್ಳಿ, ಕಡೂರು, ತರೀಕೆರೆ ಸೇರಿದಂತೆ ಬಯಲು ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ. ಮಳೆಯಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಮಾರುಕಟ್ಟೆಯಲ್ಲಿ ಬಿಡಿಗಾಸಿಗೆ ಕೇಳಿದ್ದಕ್ಕೆ ರೈತರು ಹತಾಶರಾಗಿದ್ದಾರೆ. ಎಪಿಎಂಸಿಗೆ ಬಂದ ಹಣ್ಣಿನಲ್ಲಿ ಶೇ.40ರಷ್ಟು ಜ್ಯೂಸ್​ಗೂ ಬಾರದೆ ಚರಂಡಿ ಪಾಲಾಗಿದೆ.

ಜ್ಯೂಸ್ ಟೊಮ್ಯಾಟೊಗೆ 1 ರೂ.: ರೈತರು ಎಪಿಎಂಸಿಗೆ ತಂದ ಹಣ್ಣಿನಲ್ಲಿ ನಿತ್ಯ ಸಾವಿರಾರು ಕ್ರೇಟ್ ಟೊಮ್ಯಾಟೊ ಕೆಜಿಗೆ 1 ರೂ.ನಂತೆ ತಮಿಳುನಾಡಿಗೆ ಜ್ಯೂಸ್​ಗಾಗಿ ಕೊಂಡೊಯ್ಯಲಾಗುತ್ತಿದೆ. ಗುಣಮಟ್ಟ ಕಳೆದುಕೊಂಡಿರುವ ನೂರಾರು ಕ್ರೇಟ್ ಹಣ್ಣು ಚರಂಡಿ ಪಾಲಾಗುತ್ತಿದ್ದು ಎಪಿಎಂಸಿಯಲ್ಲಿ ಎತ್ತ ನೋಡಿದರೂ ಟೊಮ್ಯಾಟೊ ಕಾಣುತ್ತದೆ. ರೈತರ ಪರಿಶ್ರಮಕ್ಕೆ ಬೆಲೆ ಸಿಗದಂತಾಗಿದೆ.

ಎಕರೆಗೆ 1 ಲಕ್ಷ ರೂ. ಬಂಡವಾಳ: ಹೊಲದಲ್ಲಿ ಬೀಜ ನಾಟಿ, ಔಷಧ, ಗೊಬ್ಬರ, ಕೋಲು ನೆಟ್ಟು ದಾರ ಕಟ್ಟುವುದು, ಕಾರ್ವಿುಕರ ಕೂಲಿ, ಕ್ರೇಟ್ ಬಾಡಿಗೆ, ಕಟಾವು, ವಾಹನ ಬಾಡಿಗೆ ಸೇರಿ ಒಂದು ಎಕರೆಗೆ 1ರಿಂದ 1.50 ಲಕ್ಷ ರೂ.ವರೆಗೆ ಬಂಡವಾಳ ಹಾಕುವುದಲ್ಲದೆ 3 ತಿಂಗಳು ರೈತರು ಶ್ರಮ ಹಾಕಿರುತ್ತಾರೆ. ಕಾಲಕಾಲಕ್ಕೆ ಔಷಧ, ಗೊಬ್ಬರ ನೀಡಿದಾಗ ಉತ್ತಮ ಬೆಳೆ ಬಂದರೆ ಒಂದು ಎಕರೆಯಲ್ಲಿ 25 ಟನ್ ಫಸಲು ಬರುತ್ತದೆ. ಆದರೆ ಮಳೆಯಿಂದ ಶೇ.60ರಷ್ಟು ಬೆಳೆ ಹಾನಿಯಾಗಿದೆ ಎಂಬುದು ರೈತರ ಅಳಲು. ಲಕ್ಯಾ ಸುತ್ತಮುತ್ತ ಗ್ರಾಮಗಳ ಬಹಳಷ್ಟು ಹೊಲಗಳಲ್ಲಿ ಟೊಮ್ಯಾಟೊ ನೆಲಕಚ್ಚಿದ್ದರೆ, ಬೆಲೆ ಕುಸಿತದಿಂದ ಕಂಗಾಲಾದ ರೈತರು ಫಸಲನ್ನು ಗಿಡದಲ್ಲೇ ಬಿಟ್ಟಿದ್ದಾರೆ.

ಪರಿಹಾರಕ್ಕೆ ಒತ್ತಾಯ: ಗುಣಮಟ್ಟದ ಟೊಮ್ಯಾಟೊ ದೆಹಲಿ, ಬಾಂಗ್ಲಾ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮತ್ತಿತರ ಕಡೆಗೆ ರಫ್ತಾಗುತ್ತದೆ. ಇಲ್ಲಿನ ಟೊಮ್ಯಾಟೊ ಮಳೆಯಿಂದ ಗುಣಮಟ್ಟ ಕಳೆದುಕೊಂಡಿದ್ದರಿಂದ ಹೊರ ರಾಜ್ಯಗಳಲ್ಲೂ ಬೇಡಿಕೆ ಕಡಿಮೆಯಾಗಿ ಸ್ಥಳೀಯ ವರ್ತಕರು ಖರೀದಿಸಲು ಮುಂದಾಗುತ್ತಿಲ್ಲ. ಟೊಮ್ಯಾಟೊ ನೆಲಕಚ್ಚಿರುವ ಪ್ರದೇಶಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಹಾಕಿದ ಬಂಡವಾಳ ಪರಿಹಾರ ರೂಪದಲ್ಲಾದರೂ ಸಿಕ್ಕರೆ ಸಾಲ ತೀರಿಸಬಹುದು ಎಂಬುದು ರೈತರ ಅಭಿಪ್ರಾಯ.