ಜಿಲ್ಲೆ

ಟೊಮ್ಯಾಟೊ ದರ ಕುಸಿತದಿಂದ ಬೆಳೆಗಾರರು ಕಂಗಾಲು

ಮಲ್ಲು ಕಳಸಾಪೂರ ಲಕ್ಷೆ್ಮೕಶ್ವರ

ಪ್ರತಿವರ್ಷ ಬೇಸಿಗೆ ಬರುತ್ತಿದ್ದಂತೆ ತರಕಾರಿಗಳ ದರ ಏರಿಕೆಯಾಗುತ್ತದೆ. ಆದರೆ, ಈ ಬಾರಿ ಅದಕ್ಕೆ ತದ್ವಿರುದ್ಧ. ಬಹುತೇಕ ಎಲ್ಲ ತರಕಾರಿಗಳ ಸಗಟು ಬೆಲೆ ಪಾತಾಳ ಕಂಡಿದ್ದು, ರೈತರು ಮತ್ತೆ ಕಂಗಾಲಾಗುವಂತಾಗಿದೆ.

ಈ ಬಾರಿ ನೂರಾರು ಹೆಕ್ಟೇರ್​ನಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆ ಯನ್ನು ಕೇಳುವವರಿಲ್ಲ. ಕೆಲವರು ಅತಿ ಕಡಿಮೆ ದರಕ್ಕೆ ಮಾರಾಟ ಮಾಡಿ ಹೋಗುತ್ತಿದ್ದರೆ, ಇನ್ನು ಕೆಲವರು ಟೊಮ್ಯಾಟೊ ಹಣ್ಣುಗಳನ್ನು ದಾರಿಯಲ್ಲಿಯೇ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ತಿಂಗಳು ಪ್ರತಿ ಕೆಜಿಗೆ 100 ರೂ. ಆಸುಪಾಸಿನಲ್ಲಿತ್ತು. ಈಗ ಪ್ರತಿ ಕೆಜಿಗೆ 4ರಿಂದ 5 ರೂ.ಗಳಿಗೂ ಕೇಳುವವರಿಲ್ಲದಂತಾಗಿದೆ. ಇದರಿಂದ ರೈತರಿಗೆ ಹಾಕಿದ ಬಂಡವಾಳವೂ ಕೈಸೇರದಂತಾಗಿದೆ. ಕಳೆದ ತಿಂಗಳಿನಲ್ಲಿದ್ದ ದರ ನೋಡಿದ ರೈತರು ಮುಂದೆಯೂ ಇದೇ ದರ ಸಿಗುತ್ತದೆ ಎಂಬ ಆಸೆಯಿಂದ ಹಿಂಗಾರು ಹಂಗಾಮಿನಲ್ಲಿ ಅಂದಾಜು 400 ಹೆಕ್ಟೇರ್​ನಲ್ಲಿ ಟೊಮ್ಯಾಟೊ ಬೆಳೆದಿದ್ದರು. ಆದರೆ, ಇದೀಗ ದಿಢೀರ್ ದರ ಕುಸಿತ ಆಗಿದೆ. ಒಂದು ಬಾಕ್ಸ್ ಟೊಮ್ಯಾಟೊ ದರ (15-20 ಕೆಜಿ) ದರ 50ರಿಂದ 60 ರೂ. ಆಗಿದ್ದು, ಚಿಲ್ಲರೆಯಾಗಿ 5 ರೂ.ಗೆ ಕೆ.ಜಿ.ಯಂತೆ ಶುಕ್ರವಾರದ ಸಂತೆಯಲ್ಲಿ ಮಾರಾಟ ವಾಯಿತು. ಇದರಿಂದ ಹಾಕಿದ ಬಂಡವಾಳವೂ ಕೈಗೆ ಬಾರದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಸಮೃದ್ಧ ಬೆಳೆ: ಹಿಂಗಾರಿನಲ್ಲಿ ಅಧಿಕ ಮಳೆಯಾಗಿದ್ದರಿಂದ ಉತ್ತಮ ತೇವಾಂಶ ಹೆಚ್ಚಿಗೆ ಇತ್ತು. ಹೀಗಾಗಿ, ಈ ಬಾರಿ ಟೊಮ್ಯಟೊ ಫಸಲು ಸಮೃದ್ಧವಾಗಿ ಬೆಳೆದಿದೆ. ಆದರೆ ಮಾರುಕಟ್ಟೆಗೆ ತಾಲೂಕಿನ ಹಳ್ಳಿಗಳು ಸೇರಿ ಹಾವೇರಿ, ಸವಣೂರು, ಮುಳಗುಂದ ಭಾಗದ ರೈತರಿಂದ ಅಪಾರ ಪ್ರಮಾಣದಲ್ಲಿ ಟೊಮ್ಯಾಟೊ ಮಾರಾಟಕ್ಕೆ ಬಂದಿರುವುದರಿಂದ ದರ ಏಕಾಏಕಿ ಪಾತಾಳಕ್ಕೆ ಕುಸಿದಿದೆ ಎನ್ನುತ್ತಾರೆ ಸಗಟು ವ್ಯಾಪಾರಸ್ಥರು.