ಜಿಲ್ಲೆ

ಟೇಲರ್ಸ್ ಕಲ್ಯಾಣ ಮಂಡಳಿ ಸ್ಥಾಪಿಸಿ

Bidar

ಬೀದರ್: ಕಲ್ಯಾಣ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಟೇಲರ್ಸ್ ಮತ್ತು ಸಹಾಯಕರ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ, ಗಾರ್ಮೆಂಟ್ಸ್ ಮತ್ತು ಇತರೆ ತಯಾರಿಕಾ ವಲಯದಲ್ಲಿ ದುಡಿಯುವ ಕಾರ್ಮಿಕರು ಕನಿಷ್ಠ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಟೇಲರಿಂಗ್ ಕೆಲಸದಲ್ಲಿ ದುಡಿಯುತ್ತಿರುವ ಟೇಲರ್ಸ್ ಹಾಗೂ ಸಹಾಯಕರ ಜತೆ ಮನೆಯಲ್ಲಿ ಬಟ್ಟೆ ಹೊಲೆಯುವವರು (ವಿಶೇಷವಾಗಿ ಮಹಿಳೆಯರು) ಸಾಮಾಜಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇವರಿಗೆ ಕಾರ್ಮಿಕ ಕಾಯ್ದೆ ಅಡಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿದರು.

ಬೀದರ್ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಜನರು ಟೇಲರಿಂಗ್ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ 8 ತಿಂಗಳಿಂದ ಬಹಳಷ್ಟು ಜನರಿಗೆ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ವಿವಿಧ ವೃತ್ತಿಯಲ್ಲಿದ್ದವರಿಗೆ ಸರ್ಕಾರ ಸಹಾಯಧನ, ಆರ್ಥಿಕ ನೆರವು ಒದಗಿಸಿದೆ. ಆದರೆ ಟೇಲರ್ ಮತ್ತು ಸಂಬಂಧಿತ ಕಾರ್ಮಿಕರಿಗೆ ನೆರವು ನೀಡದೆ ಸರ್ಕಾರವು ಮಲತಾಯಿ ಧೋರಣೆ ತಾಳಿದೆ ಎಂದು ದೂರಿದರು.

ಈ ವೃತ್ತಿಯಲ್ಲಿ ತೊಡಗಿದ ಎಲ್ಲರ ಅಭಿವೃದ್ಧಿಗಾಗಿ ಟೇಲರ್ಸ್ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಕಟ್ಟಡ ಮತ್ತು ಇತರರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಎಲ್ಲ ಸೌಲಭ್ಯ ಕೊಡಬೇಕು. ಟೇಲರ್ಸ್ ವೃತ್ತಿ ಸಣ್ಣ ಕೈಗಾರಿಕೆ ಎಂದು ಪರಿಗಣಿಸಿ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲು ಆಗ್ರಹಿಸಿದ್ದಾರೆ. ಬೇಡಿಕೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಜಿಲ್ಲಾ ಸಂಚಾಲಕ ರಾಜು ಕೊಡ್ಡಿಕರ್, ಬಾಬುರಾವ ಹೊನ್ನಾ, ಲಕ್ಷ್ಮೀ ದಂಡಿನ್, ಸಮಿಯೋದ್ದೀನ್ ಜಂಬಗಿ, ನಿಜಾಮುದ್ದೀನ್ ಮನ್ನಾಎಖೇಳ್ಳಿ, ಅಹ್ಮದ್ ಜಂಬಗಿ ಇತರರಿದ್ದರು.