ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಚೇಂಬರ್ಗೆ ಅಳವಡಿಸಿದ್ದ ಮುಚ್ಚಳ ಕಳ್ಳತನ ಮಾಡಿದ್ದ ನಾಲ್ವರನ್ನು ವಿದ್ಯಾನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 81,000 ರೂ. ಮೌಲ್ಯದ ಮೂರು ಮುಚ್ಚಳ, ಆಟೋರಿಕ್ಷಾ, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ.
ಭೈರಿದೇವರಕೊಪ್ಪ ನಿವಾಸಿ ಬಸವರಾಜ ಸಿದ್ದಪ್ಪ ಕಂದಗಲ್ (34), ಉಣಕಲ್ನ ಲೋಹಿತ ಯಲ್ಲಪ್ಪ ಬಾಳಪ್ಪನವರ (20), ಮಹೇಶ ಬಸಪ್ಪ ಪದ್ಮಣ್ಣವರ (28) ಹಾಗೂ ಬಂಕಾಪುರ ಚೌಕ್ನ ಮೊಹಮ್ಮದ್ ಗೌಸ್ ಅಬ್ದುಲ್ ನಬಿ ಬಂಡೆ (38) ಬಂಧಿತರು.
ಕಳೆದ ವಾರ ಶಿರೂರ ಪಾರ್ಕ್ ವೃತ್ತದ ಬಳಿ ಚೇಂಬರ್ಗೆ ಅಳವಡಿಸಿದ್ದ ಮುಚ್ಚಳಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಸ್ಥಳೀಯರಿಂದ ಮಾಹಿತಿ ಬಂದಿದ್ದರ ಮೇರೆಗೆ ಸ್ಥಳಕ್ಕೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ ಆಗಮಿಸಿ ಪರಿಶೀಲಿಸಿದ್ದರು. ಪಾಲಿಕೆ ಅಧಿಕಾರಿಗಳು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಗುಜರಿಗೆ ಮಾರಾಟ: ಆಟೋ ಚಾಲಕ ಬಸವರಾಜ, ಲೋಹಿತ ಹಾಗೂ ಮಹೇಶ ಮುಚ್ಚಳಗಳನ್ನು ಕದ್ದು ಗುಜರಿ ವ್ಯಾಪಾರಿ ಮೊಹಮ್ಮದ್ ಗೌಸ್ಗೆ ಮಾರಾಟ ಮಾಡಿದ್ದರು. 10 ಸಾವಿರ ರೂ. ಮೌಲ್ಯದ ಮುಚ್ಚಳವನ್ನು 1800 ರೂ.ಗೆ ಒಂದರಂತೆ ಮಾರಾಟ ಮಾಡಿ, ಪಾರ್ಟಿ ಮಾಡಿದ್ದರು. ಲೋಹಿತನ ವಿರುದ್ಧ ಈ ಹಿಂದೆ ಕಳ್ಳತನ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಖತರ್ನಾಕ್ ಮಂದಿ: ಟೆಂಡರ್ ಶ್ಯೂರ್ ರಸ್ತೆಯ ಮೇಲೆ ಬಿದ್ದ ಮಳೆನೀರು ಅಲ್ಲೇ ನಿಲ್ಲದೆ ಸರಾಗವಾಗಿ ಹರಿದು, ಚೇಂಬರ್ ಮೂಲಕ ಚರಂಡಿ ಸೇರುವ ವ್ಯವಸ್ಥೆ ಇದೆ. ಈ ಚೆಂಬರ್ಗಳಿಗೆ ಬೀಡಿನ ಮುಚ್ಚಳವನ್ನು ಅಳವಡಿಸಿ, ಕಳ್ಳಕಾಕರು ಸುಲಭವಾಗಿ ತೆಗೆಯದಿರಲಿ ಎಂದು ಬೆಸುಗೆ ಹಾಕಲಾಗಿದೆ. ಮೂವರು ಖದೀಮರು ಸಿಸಿಟಿವಿ ಕ್ಯಾಮರಾ ಇಲ್ಲದ ಸ್ಥಳದಲ್ಲಿ ಹಗಲಿನಲ್ಲಿಯೇ ಮುಚ್ಚಳದ ಬೆಸುಗೆ ಕತ್ತರಿಸಿ ಒಯ್ದಿದ್ದರು. ಸ್ಥಳೀಯರು ಪ್ರಶ್ನಿಸಿದಾಗ, ತಾವು ಪಾಲಿಕೆ ಸಿಬ್ಬಂದಿ, ದುರಸ್ತಿ ಕೆಲಸ ಇದೆ, ನಂತರ ಮುಚ್ಚಳವನ್ನು ತಂದು ಪುನಃ ಅಳವಡಿಸುತ್ತೇವೆ ಎಂದು ಸಲೀಸಾಗಿ ಹೇಳಿದ್ದರು. ಪೊಲೀಸರು ವಿವಿಧ ಕೋನಗಳಿಂದ ತನಿಖೆ ನಡೆಸಿ ಮಾಲು ಸಮೇತ ಬಂಧಿಸಿರುವ ಮೂಲಕ ಇಂಥ ಕೃತ್ಯ ಮಾಡುವ ಇತರರಿಗೆ ಎಚ್ಚರಿಕೆಯನ್ನೂ ರವಾನಿಸಿದಂತಾಗಿದೆ.