ಜಿಲ್ಲೆ

ಟೀಕೆಗಳೇ ಮೆಟ್ಟಿಲು, ಆರೋಪಗಳೇ ಸವಾಲು: ಸಿಎಂ

reportermys

ಮೈಸೂರು: ಟೀಕೆಯನ್ನು ಮೆಟ್ಟಿಲು ಮಾಡಿಕೊಂಡು, ಆರೋಪಗಳನ್ನು ಸವಾಲಾಗಿ ಸ್ವೀಕರಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರೂರಿನಲ್ಲೇ ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನ್ನ ವಿರುದ್ಧ ಎಷ್ಟೇ ಟೀಕೆ ಮಾಡಿ. ನನಗೆ ಏನೇ ಅವಮಾನ, ಅಪಮಾನ ಮಾಡಿ. ಅದೆಲ್ಲವನ್ನೂ ಆತ್ಮವಿಶ್ವಾಸದಿಂದ ಎದುರಿಸುವೆ. ಇದುವೇ ದೃಢಸಂಕಲ್ಪದೊಂದಿಗೆ ನನಗೆ ಇನ್ನಷ್ಟು ಶಕ್ತಿ ತಂದುಕೊಡಲಿದೆ. ಆದ್ದರಿಂದ ಪ್ರತಿಪಕ್ಷಗಳ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿದರು.
ಉತ್ತಮ ಕೆಲಸ ಮಾಡಿ ರಾಜ್ಯದ ಜನರ ಹೃದಯವನ್ನು ಗೆಲ್ಲುವೆ. ಆ ಮೂಲಕ ಮುಂದಿನ ಅವಧಿಗೆ ಜನಪರ ಸರ್ಕಾರ ಮಾಡುವೆ. ಇದುವೇ ನನ್ನ ಗುರಿ ಎಂದು ಹೇಳಿದರು.
ಪ್ರತಿಪಕ್ಷಗಳು ಜನರ ಧ್ವನಿಯಾಗಿ ಕೆಲಸ ಮಾಡಿ ಅವರ ವಿಶ್ವಾಸ ಗಳಿಸಬೇಕು. ಆದರೆ, ವಾಮಮಾರ್ಗ ಮತ್ತು ಮೋಸ ಮಾರ್ಗದಿಂದ ಜನಾಶೀರ್ವಾದ ಪಡೆಯಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.
ಬೆಂಗಳೂರಿನ ಯಾವ ಸ್ಥಳದಲ್ಲಿ ಏನು ಮಾಡಿದ್ದೀರಿ? ಅದೇ ಸ್ಥಳದಲ್ಲಿ ನೀವು ಇರುವಂತೆ ಮಾಡುವೆ ಎಂದು ಪೇಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವರು ಆ ಭಾಗ್ಯ, ಈ ಭಾಗ್ಯ ಕೊಟ್ಟು ರಾಜ್ಯವನ್ನು ದುರ್ಭಾಗ್ಯಕ್ಕೆ ತಳ್ಳಿದರು. ಆದ್ದರಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಜನಬೆಂಬಲ ದೊರೆಯಲಿಲ್ಲ. ಆದ್ದರಿಂದ ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೋಸ ಮಾಡಲು ಆಗಲ್ಲ. ಜನರು ಜಾಗೃತರಾಗಿದ್ದಾರೆ. ಸುಳ್ಳು ಕಥೆಗಳು, ಅಪಪ್ರಚಾರ ಜನರ ಮನಸ್ಸನ್ನು ಕದಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವರು ಅಧಿಕಾರ ಕಳೆದುಕೊಂಡ ಮೇಲೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಾರೆ. ಇನ್ನೂ ಕೆಲ ರಾಜಕಾರಣಿಗಳು ಅಧಿಕಾರಕ್ಕಾಗಿ ಹಪಾಹಪಿಗಳು ಎಂದು ಮೂದಲಿಸಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಇನ್ನಿತರರು ಇದ್ದರು.