ಮೈಸೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಎಷ್ಟೇ ಟೀಕಿಸಿದರೂ ಅವರ ಸಾಧನೆಯನ್ನು ಅಳಿಸಲು ಸಾಧ್ಯ ಇಲ್ಲ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿಗೌಡ ತಿಳಿಸಿದರು.
ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಇಂದಿರಾ ಗಾಂಧಿ ಜಯಂತಿಯಲ್ಲಿ ‘ಭಾರತದ ರಾಜಕಾರಣದ ದಾರ್ಶನಿಕ ಪ್ರಜ್ಞೆ -ಇಂದಿರಾ ಗಾಂಧಿ ವಿಚಾರ’ ಕುರಿತು ಮಾತನಾಡಿದರು.
ದೇಶದ ಹಿತಕ್ಕೆ ಏನೇನು ಬೇಕಾಗಿತ್ತೋ ಅದನ್ನು ಅನುಷ್ಠಾನಕ್ಕೆ ತಂದವರು ಇಂದಿರಾಗಾಂಧಿ ಅವರು. ಯುದ್ಧದಲ್ಲಿ ಬಾಂಗ್ಲಾ ಗೆಲುವಿಗಾಗಿ ಇಂದಿರಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಅಮೆರಿಕ ಮದರ್ ಪ್ರಶಸ್ತಿ ನೀಡಿತು. ಫ್ರಾನ್ಸ್ ಜಗತ್ತಿನ ಪ್ರಭಾವಿ ನಾಯಕಿ ಗೌರವ ನೀಡಿತು. ಹಾಗಾಗಿ ಈಗ ಇಂದಿರಾ ಗಾಂಧಿ ಅವರನ್ನು ಎಷ್ಟೇ ಟೀಕಿಸಿದರೂ ಅವರ ಸಾಧನೆ ಮರೆಮಾಚಲು ಸಾಧ್ಯವಿಲ್ಲ ಎಂದರು.
ದೇಶ ವಿಭಜನೆಯಾದಾಗ ಆಹಾರದ ಕೊರತೆ ಇತ್ತು. ಕಿತ್ತು ತಿನ್ನುವ ಬಡತನ, ಭೀಕರ ಬರಗಾಲದಿಂದ ದೇಶ ನಲುಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಮಸ್ಯೆ ಇತ್ಯರ್ಥ ಸಮಸ್ಯೆ ಮತ್ತು ನೆರೆಯ ದೇಶಗಳಿಂದ ಯುದ್ಧದ ಭೀತಿಯಿತ್ತು. ಈ ಸಮಸ್ಯೆಯನ್ನು ಗಾಂಧಿ ಕುಟುಂಬ ಯಶಸ್ವಿಯಾಗಿ ನಿಭಾಯಿಸಿತು ಎಂದರು.
ಗಾಂಧಿ ಕುಟುಂಬ ಎಂದರೆ ವಂಶಾಡಳಿತ ಅಲ್ಲ. ಕಾಂಗ್ರೆಸ್ ರಾಜಕೀಯ ಪಕ್ಷ ಮಾತ್ರವಲ್ಲ. ಒಂದು ಚಳವಳಿ. ಇಂದಿರಾ ಅವರು ದೇಶಕ್ಕಾಗಿ ದುಡಿದರು. ಸೋನಿಯಾ ಗಾಂಧಿ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದರು. ಇಂದಿರಾ ಗಾಂಧಿ ಎದುರಿಸಿದ ಸವಾಲುಗಳನ್ನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.
1980ರಲ್ಲಿ ಸ್ಥಾಪನೆಯಾದ ಭಾರತೀಯ ಜನತಾ ಪಕ್ಷವೂ ಕಾಂಗ್ರೆಸ್ ಅನ್ನು ಮುಕ್ತ ಮಾಡುವುದಾಗಿ ಹೇಳುತ್ತದೆ. ಅದು ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಒಮ್ಮೊಮ್ಮೆ ಮಂಕಾಗಬಹುದು. ಮತ್ತೆ ಪುಟಿದೇಳುತ್ತದೆ. ಚಳವಳಿಯಾಗಿ ಜನರ ಮಧ್ಯೆ ನಿಲ್ಲುತ್ತದೆ ಎಂದು ಹೇಳಿದರು.
ಬಿಜೆಪಿಯವರು ಮನೆಗೆ ಹೋಗಲ್ಲ, ಕಾಂಗ್ರೆಸ್‌ನವರು ಬೀದಿಗೆ ಹೋಗಲ್ಲ ಎಂಬ ಮಾತಿದೆ. ಎಲ್ಲ ಕಾರ್ಯಕರ್ತರು ಜನರೊಂದಿಗೆ ಬೆರೆಯಬೇಕು. ಸರ್ಕಾರದ ಯೋಜನೆಗಳು, ಪಕ್ಷದ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಮನವರಿಕೆ ಮಾಡಬೇಕು. ಅಧ್ಯಯನ ಶಿಬಿರ ಹಮ್ಮಿಕೊಂಡು ಬಲಿಷ್ಠ ಕಾರ್ಯಕರ್ತರ ಪಡೆಯನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಚಿಕ್ಕರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಸಂಘರ್ಷ, ಹಿಂಸಾಚಾರದಿಂದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೈ ಕಟ್ಟಿ ಕುಳಿತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹಮದ್ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ. ಅದೇ ಮಾತನ್ನು ಮಾಧ್ಯಮಗಳ ಎದುರು ರಾಧಿಕಾ ಕುಮಾರಸ್ವಾಮಿ ಹೇಳಿದರೆ ಯಾವ ತೊಂದರೆ ಇಲ್ಲ. ಜಮೀರ್ ಹೇಳಿದಾಗ ಏಕೆ ವಿವಾದ ಎಂದು ಪ್ರಶ್ನಿಸಿದರು.
ಸಚಿವ ಡಾ.ಎಚ್.ಸಿ.ಮಹದೇವಪ್ಪ, ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸಂಸದ ಶಿವಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಮುಖಂಡರಾದ ಎಂ.ಶಿವಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಡಿ.ಈಶ್ವರ್ ಚಕ್ಕಡಿ, ಡೇರಿ ವೆಂಕಟೇಶ್, ಸೇವಾದಳದ ಗಿರೀಶ್ ಇದ್ದರು.