ಕಲಬುರಗಿ: ಮಳಖೇಡದ ಕಾಗಿಣೆ ತೀರದ ಉತ್ತರಾದಿ ಮಠದಲ್ಲಿ ಮೂರು ದಿನದ ಶ್ರೀ ಜಯತೀರ್ಥರ ಆರಾಧನೆ ಮಹೋತ್ಸವಕ್ಕೆ ಮಂಗಳವಾರ ಭಕ್ತಿಭಾವದ ತೆರೆ ಬಿದ್ದಿತು. ದೇಶದ ವಿವಿಧೆಡೆಯಿಂದ ಆಗಮಿಸಿದ ಅಸಂಖ್ಯ ಭಕ್ತರು ಮೂಲ ವೃಂದಾವನ ಹಾಗೂ ಶ್ರೀ ಸತ್ಯಾತ್ಮತೀರ್ಥರ ದರ್ಶನ ಪಡೆದು ಪುನೀತರಾದರು.
ಉತ್ತರಾರಾಧನೆ ನಿಮಿತ್ತ ನಸುಕಿನ ಜಾವ ಶ್ರೀ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಬ್ರಾಹ್ಮೀ ಉತ್ಥಾನ, ದಂಡೋದಕ ಸ್ನಾನ, ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ ನಡೆಯಿತು. ಬಳಿಕ ಶ್ರೀಗಳು ಭಕ್ತರಿಗೆ ಸುಧಾ ಪಾಠ, ತಪ್ತ ಮುದ್ರಾಧಾರಣೆ ಮಾಡಿದರು.
ನಂತರ ಮಠದ ಪ್ರಾಂಗಣದಿಂದ ಮುಖ್ಯ ರಸ್ತೆವರೆಗೆ ಗಜವಾಹನ ಸೇವೆ ಜರುಗಿತು. ಮಾರ್ಗದುದ್ದಕ್ಕೂ ಭಕ್ತರ ಭಜನೆ, ನೃತ್ಯ ಗಮನ ಸೆಳೆಯಿತು. ಸಾಕಷ್ಟು ದಾಸರ ಪದಗಳು ಮೊಳಗಿದವು. ಶ್ರೀ ಜಯತೀರ್ಥ ಮಹಾರಾಜ ಕಿ ಜೈ.. ಶ್ರೀ ಸತ್ಯಾತ್ಮತೀರ್ಥರಿಗೆ ಜಯವಾಗಲಿ.. ಹರಿ ಸರ್ವೋತ್ತಮ, ವಾಯು ಜೀವೋತ್ತಮ.. ಸೇರಿ ಹಲವು ಘೋಷಣೆಗಳು ಕೇಳಿಬಂದವು.
ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಪಂ.ಶಶಿ ಆಚಾರ್ಯ, ರಘೂತ್ತಾಮಚಾರ್ಯ ನಾಗಸಂಪಿಗೆ, ಪಾಂಡುರಂಗಾಚಾರ್ಯ ರೊಟ್ಟಿ, ಪಂ.ವೆಂಕಣ್ಣಾಚಾರ್ಯ, ವಿಜಯ ವಿಠ್ಠಲಾಚಾರ್ಯ ಮುಗೋಡ, ಘಂಟಿ ರಾಮಾಚಾರ್ಯ, ಗುರುಮಧ್ವಾಚಾರ್ಯ ನವಲಿ, ಪಂ. ಸತ್ಯಬೋಧಾಚಾರ್ಯ ಘಟಾಲಿ, ಪ್ರದ್ಯುಮ್ನಾಚಾರ್ಯ ಜೋಶಿ, ವಿಶ್ವಪ್ರಜ್ಞಾಚಾರ್ಯ ಮಾಹುಲಿ, ತಿರುಮಲಾಚಾರ್ಯ ಕೊಪ್ಪರ, ಉತ್ತರಾದಿ ಮಠದ ಛಾಯಗ್ರಾಹಕ ವೆಂಕಟೇಶ ಆಚಾರ್ಯ ಚಿಂಚೋಳಿ ಇತರರಿದ್ದರು.
ಪೂಜಾ ವೈಭವ ಕಣ್ತುಂಬಿಕೊಂಡ ಭಕ್ತರು: ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಶ್ರೀ ಸತ್ಯಾತ್ಮತೀರ್ಥರಿಂದ ನಡೆದ ಮೂಲ ರಾಮದೇವರ ಪೂಜೆ ವೈಭವನನ್ನು ಭಕ್ತರು ಕಣ್ತುಂಬಿಕೊಂಡರು. ಕೆಲವರು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡುತ್ತಿದ್ದರೆ, ಇನ್ನು ಕೆಲವರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡು ಬಂದಿತು. ಪಂಡಿತರಿಂದ ಮಂತ್ರಘೋಷ ಮೊಳಗಿದವು.
ಸೇವಾಕರ್ತರು ಸಾಥ್: ಮೂರು ದಿನದ ಆರಾಧನೆ ಯಶಸ್ವಿಯಾಗಿ ನಡೆಯುವಲ್ಲಿ ಸೇವಾಕರ್ತರ ಪಾತ್ರ ಪ್ರಮುಖವಾಗಿದೆ. ಮೊದಲ ದಿನವಾದ ಭಾನುವಾರವೇ ಕಲಬುರಗಿ, ಯಾದಗಿರಿ, ರಾಯಚೂರು ಸೇರಿ ವಿವಿಧೆಡೆಯಿಂದ ಆಗಮಿಸಿದ ಸೇವಾಕರ್ತರು ಸಾಕಷ್ಟು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಯುವಕರು ಅಡುಗೆ ಬಡಿಸುವುದು, ನೀರು ಹಾಕುವಂಥ ಭಕ್ತಿಸೇವೆ ಸಲ್ಲಿಸಿದರು. ಮಹಿಳೆಯರು ರಂಗೋಲಿ ಹಾಕುವುದು, ಶ್ರೀಮಠದ ಆವರಣ ಸ್ವಚ್ಛತೆ, ಪ್ರಾಂಗಣ ಅಲಂಕಾರ ಸೇರಿ ನಾನಾ ರೀತಯ ಸೇವೆ ಮಾಡಿದರು.
ಅನಂತಪುರಕ್ಕೆ ಶ್ರೀಗಳ ಪಯಣ: ಯರಗೋಳ ಹಾಗೂ ಮಳಖೇಡದಲ್ಲಿ ಜಯತೀರ್ಥರ ಆರಾಧನೆ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಶ್ರೀಗಳು ಮಂಗಳವಾರ ಸಂಜೆ ಆಂಧ್ರಪ್ರದೇಶದ ಅನಂತಪುರದತ್ತ ಪಯಣ ಬೆಳೆಸಿದರು. ಅನಂತಪುರದಲ್ಲಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.
23ರಿಂದ ಚಾತುರ್ಮಾಸ್ಯ: ಆಂಧ್ರಪ್ರದೇಶದ ಸಂತೆಬಿದನೂರಿನಲ್ಲಿ ಶ್ರೀ ಸತ್ಯಾತ್ಮತೀರ್ಥರ 27ನೇ ಚಾತುರ್ಮಾಸ್ಯ ವ್ರತಾಚರಣೆ 23ರಿಂದ ಆರಂಭವಾಗಲಿದೆ. 22ರಂದು ಸಂಜೆ ಶ್ರೀಗಳಿಗೆ ಅದ್ದೂರಿ ಸ್ವಾಗತ, 23ಕ್ಕೆ ಚಾತುರ್ಮಾಸ್ಯ ಸಂಕಲ್ಪ, ಆ.3ರಿಂದ ಮೂರು ದಿನ ಶ್ರೀ ಸತ್ಯವರ ತೀರ್ಥರ ಆರಾಧನೆ ನಡೆಯಲಿದೆ. ನಿತ್ಯವೂ ಶ್ರೀಗಳಿಂದ ಯತಿಗಳ ವೃಂದಾವನಗಳಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಮೂಲ ರಾಮದೇವರ ಪೂಜೆ, ಭಕ್ತರಿಗೆ ಮುದ್ರಾಧಾರಣೆ ಹಾಗೂ ಅನುಗ್ರಹ ಸಂದೇಶ ನಡೆಯಲಿದೆ. ಸೆ.10ರಂದು ವ್ರತಾಚರಣೆ ಸಂಪನ್ನಗೊಳ್ಳಲಿದೆ.
ಅಂಗಡಿಗಳಲ್ಲಿ ಖರೀದಿ ಜೋರು: ಶ್ರೀ ಜಯತೀರ್ಥರ ಆರಾಧನೆಯಲ್ಲಿ ಪಾಲ್ಗೊಳ್ಳಲು ಮಳಖೇಡಕ್ಕೆ ಆಗಮಿಸಿದ ಅಸಂಖ್ಯ ಭಕ್ತರು ಯತಿಗಳ ಮೂಲ ವೃಂದಾವನಗಳ ದರ್ಶನ ಪಡೆದ ಬಳಿಕ ಮಠದ ಪ್ರಾಂಗಣದಲ್ಲಿರುವ ಅಂಗಡಿಗಳತ್ತ ಹೆಜ್ಜೆ ಹಾಕಿದರು. ದೇವರ ವಸ್ತ್ರ, ಬತ್ತಿ, ಪೂಜಾ ಸಾಮಗ್ರಿ, ಪಂಚೆ, ಅಂಗವಸ್ತ್ರ ಖರೀದಿಸುವಲ್ಲಿ ತಲ್ಲೀನರಾಗಿದ್ದರು. ಅಲ್ಲದೆ ದಾಸರ ಪದ, ವಿವಿಧ ಪುರಾಣಗಳು, ಶ್ರೀ ಜಯತೀರ್ಥರ ಮಹಾತ್ಮೆ ಸೇರಿ ವಿವಿಧ ಪುಸ್ತಕಗಳ ಖರೀದಿಯೂ ಜೋರಾಗಿತ್ತು.