ಜಿಲ್ಲೆ

ಟಿಪ್ಪರ್‌ಗಳನ್ನು ತಡೆದು ಗ್ರಾಮಸ್ಥರ ಆಕ್ರೋಶ

ಚಾಮರಾಜನಗರ: ತಾಲೂಕಿನ ಹೆಗ್ಗವಾಡಿ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್‌ಗಳನ್ನು ಶುಕ್ರವಾರ ಸಂಜೆ ಗ್ರಾಮಸ್ಥರು ತಡೆದು ನಿಲ್ಲಿಸಿದರು.

ಗ್ರಾಮದ ರಸ್ತೆಯಲ್ಲಿ ಓಡಾಡುವ ಟಿಪ್ಪರ್‌ಗಳ ವೇಗಕ್ಕೆ ಮಿತಿಯೇ ಇಲ್ಲದಂತಾಗಿದೆ. ಅತಿಯಾದ ಭಾರ ಹೊತ್ತು ಟಿಪ್ಪರ್‌ಗಳು ಸಂಚಾರ ಮಾಡುತ್ತಿವೆ. ಟಾರ್ಪಲ್ ಮುಚ್ಚದೆ ಕಲ್ಲು, ಎಂಸ್ಯಾಂಡ್ ಇನ್ನಿತರೆ ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದರಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿವೆ. ಟಿಪ್ಪರ್‌ಗಳ ವೇಗದ ಸಂಚಾರದಿಂದ ಗ್ರಾಮಸ್ಥರ ಪ್ರಾಣಕ್ಕೆ ಅಪಾಯವಿದೆ. ಟಾರ್ಪಲ್ ಮುಚ್ಚದೆ ಇರುವುದರಿಂದ ಧೂಳು ತುಂಬಿಕೊಳ್ಳುತ್ತಿವೆ. ಅಧಿಕ ಭಾರದ ಟಿಪ್ಪರ್‌ಗಳ ಸಂಚಾರದಿಂದ ಕುಡಿಯುವ ನೀರಿನ ಪೈಪ್‌ಲೈನ್ ಕೂಡ ಹಾಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಟಿಪ್ಪರ್ ತಡೆದಿರುವ ವಿಷಯ ತಿಳಿದ ಡಿವೈಎಸ್ಪಿ ಲಕ್ಷ್ಮಯ್ಯ, ಚಾ.ನಗರ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ಟಿಪ್ಪರ್ ಚಾಲಕರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಟಿಪ್ಪರ್‌ಗಳ ಹಾವಳಿ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದರು.

ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ಸಭೆ ನಡೆಸೋಣವೆಂದು ಪೊಲೀಸರು ತಿಳಿಸಿದರು. ಗ್ರಾಮಸ್ಥರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಈ ವೇಳೆ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್‌ಶಂಭು, ಕೌಶಿಕ್, ಪ್ರಕಾಶ್, ಮಹದೇವಸ್ವಾಮಿ, ಅಂಕುಶ್, ಪ್ರವೀಣ್, ರವಿಸಾಗರ್ ಮತ್ತು ಇತರರು ಇದ್ದರು.