ಮದ್ದೂರು ತಾಲೂಕಿನ ಸೋಮನಹಳ್ಳಿಯ ಎಸ್.ಸಿ.ಎಂ.ಎಂ.ಶಾಲೆಯ ಆವರಣದಲ್ಲಿ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೆಂಬಲಿಗರ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಮಾತನಾಡಿದರು. ಕದಲೂರು ರಾಮಕೃಷ್ಣ, ಮೋಹನ್‌ಕುಮಾರ್, ಪ್ರಿಯಾಂಕಅಪ್ಪುಗೌಡ, ಕೋಕಿಲಅರುಣ್‌ಕುಮಾರ್, ರಾಘವ, ಪಿ.ಸಂದರ್ಶ, ಅಪ್ಪುಗೌಡ ಇದ್ದರು. 
ಜಿಲ್ಲೆ

ಟಿಕೆಟ್ ತಪ್ಪಿಸಿದವರಿಗೆ ತಕ್ಕ ಪಾಠ

Mandya

ಮದ್ದೂರು: ವಿಧಾನಸಭೆ ಚುನಾವಣೆಗೆ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಅಂಥವರಿಗೆ ನಮ್ಮ ಶಕ್ತಿ ತೋರಿಸಬೇಕಿದ್ದು, ತಕ್ಕ ಪಾಠ ಕಲಿಸುತ್ತೇವೆ ಎಂದು ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಎಚ್ಚರಿಸಿದರು.

ತಾಲೂಕಿನ ಸೋಮನಹಳ್ಳಿಯ ಎಸ್.ಸಿ.ಎಂ.ಎಂ. ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಬಲಿಗರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಟಿಕೆಟ್ ಕೈ ತಪ್ಪಿರುವುದು ನನಗೆ, ಬೆಂಬಲಿಗರಿಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ತುಂಬ ನೋವು ತಂದಿದೆ. ಸಭೆಯಲ್ಲಿ ನನ್ನ ಬೆಂಬಲಿಗರು ಹಲವು ರೀತಿಯ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಈ ಸಂಬಂಧ ಮತ್ತೊಮ್ಮೆ ಚರ್ಚಿಸಿ ಮೂರು ದಿನಗಳಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

2004 ರಿಂದಲೂ ನನಗೆ ಟಿಕೆಟ್ ವಿಚಾರದಲ್ಲಿ ಇದೇ ರೀತಿಯಾಗುತ್ತಿದೆ. 2008ರಲ್ಲಿ ಪಕ್ಷ ಹೀನಾಯ ಸ್ಥಿತಿಯಲ್ಲಿದ್ದಾಗ ನನಗೆ ಟಿಕೆಟ್ ಕೊಟ್ಟರು, ಆಗಲೂ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಚುನಾವಣೆಯಲ್ಲಿ ನಿಂತು ಸೋತೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷವನ್ನು ಹಲವಾರು ವರ್ಷಗಳಿಂದ ಸಂಘಟಿಸಿಕೊಂಡು ಬಂದ ನನಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಸಿಗದಿರುವುದು ಮನಸ್ಸಿಗೆ ತುಂಬ ನೋವು ತಂದಿದೆ ಎಂದು ಭಾವುಕರಾದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಮಾತನಾಡಿ, ದೊಡ್ಡಪ್ಪ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ ಸಂದರ್ಭದಲ್ಲಿ ಗುರುಚರಣ್ ಅವರು ಕೂಡ ಬಿಜೆಪಿಗೆ ಹೋಗಿದ್ದರೆ ಇಂದು ಮಂತ್ರಿಯಾಗುತ್ತಿದ್ದರು. ಆದರೆ, ಡಿ.ಕೆ.ಶಿವಕುಮಾರ್ ಅವರನ್ನು ನಂಬಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಇದ್ದು ನಿಷ್ಠೆಯಿಂದ ಪಕ್ಷ ಕಟ್ಟಿದ್ದಕ್ಕೆ ಮೋಸ ಮಾಡಿದರು ಎಂದು ಆರೋಪಿಸಿದರು.

ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಿಯಾಂಕಾ ಅಪ್ಪುಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಸೂತಕದ ವಾತಾವರಣ ತಂದ್ರಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಾಗುವುದು ಎಂದರು.
ಗುರುಚರಣ್ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಮಿಸ್ ಆಗಿರುವುದಕ್ಕೆ ಪುರಸಭಾ ಸದಸ್ಯೆ ಕೆ.ಪಿ.ಕೋಕಿಲಾ ಅರುಣ್ ರಾಜೀನಾಮೆ ನೀಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಮುಖಂಡರಾದ ರಾಘವ, ಅರುಣ್‌ಕುಮಾರ್, ಅಪ್ಪುಗೌಡ, ಆನಂದ್, ರವಿಕುಮಾರ್, ಅಸೀಪ್, ಮಣಿಗೆರೆ ರಾಮಚಂದ್ರು, ಬೊಮ್ಮೇಗೌಡ ಇತರರು ಇದ್ದರು.