ಜಿಲ್ಲೆ

ಟಿಕೆಟ್ ಘೋಷಣೆಗೂ ಮುನ್ನ ಪ್ರಚಾರ ಆರಂಭಿಸಿದ ಸ್ವರೂಪ್

reportermys

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲದ ನಡುವೆಯೂ ಪ್ರಮುಖ ಟಿಕೆಟ್ ಆಕಾಂಕ್ಷಿ ಹೆಚ್.ಪಿ.ಸ್ವರೂಪ್ ಗುರುವಾರ ನಗರದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು.
ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಆದಿಚುಂಚನಗಿರಿ ಶ್ರೀ ಶಂಭುನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ವರೂಪ್ ಅಭಿಮಾನಿಗಳು ಭಾಗವಹಿಸಿ ಅವರಿಗೆ ಸಾಥ್ ನೀಡಿದರು. ಪ್ರಚಾರ ಆರಂಭಕ್ಕೂ ಮುನ್ನ ಸ್ವರೂಪ್ ಅಭಿಮಾನಿಗಳು ಎಂ ಜಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ‘ನಮ್ಮ ಮುಂದಿನ ಶಾಸಕ ಹೆಚ್.ಪಿ ಸ್ವರೂಪ್ ಅಣ್ಣ’ ಎಂದು ಘೋಷಣೆ ಮೊಳಗಿಸಿದರು. ಕಾಲ್ನಡಿ ಮೂಲಕ ನಗರದ ಹಲವು ಪ್ರದೇಶಗಳಿಗೆ ತೆರಳಿ ಪ್ರಚಾರ ಆರಂಭಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಪಿ. ಸ್ವರೂಪ್, ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಸೂಚನೆಯ ಮೇರೆಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರವೀಂದ್ರ ನಗರ, ಬಸಹಟ್ಟಿ ಕೊಪ್ಪಲು, ಬೀರನಹಳ್ಳಿ ಕೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ನೇತೃತ್ವದಲ್ಲಿ ಪ್ರಚಾರ ಮಾಡಲಾಗುವುದು ಎಂದರು.
ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಅಧ್ಯಕ್ಷ ಸಿಎಂ ಇಬ್ರಾಹಿಂ ಎಲ್ಲರ ತೀರ್ಮಾನದಂತೆ ಟಿಕೆಟ್ ಯಾರಿಗೆ ಕೊಟ್ಟರು ಅವರ ಪರ ಕೆಲಸ ಮಾಡಲಿದ್ದೇನೆ ಎಂದು ಸ್ವರೂಪ್ ಹೇಳಿದರು.