ಜಿಲ್ಲೆ

ಟಿಎಸ್​ಎಸ್​ನಿಂದ ಮನೆ ಬಾಗಿಲಿಗೆ ಹಣ

ಶಿರಸಿ: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಹಣಕಾಸಿನ ಅಗತ್ಯವಿರುವ ಸಂಘದ ಸದಸ್ಯರಿಗೆ ಮನೆಬಾಗಿಲಿಗೆ ಹಣ ಬಟವಡೆ ಮಾಡುವ ವ್ಯವಸ್ಥೆಗೆ ಇಲ್ಲಿನ ಟಿಎಸ್​ಎಸ್ ಮುಂದಾಗಿದೆ.

ಸಂಘದ ಶಿರಸಿ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿರುವ ಸಂಘವು, ಒಂದು ಊರು ಅಥವಾ ಗ್ರಾಮ ಮಟ್ಟದಲ್ಲಿ ಕನಿಷ್ಠ ಹತ್ತು ಜನರಿಗೆ ಹಣದ ಅವಶ್ಯಕತೆ ಇದ್ದರೆ ಹಣ ಬಟವಡೆ ಮಾಡಲಿದೆ.

ಹಣದ ಅವಶ್ಯಕತೆಯ ಬಗ್ಗೆ ಆ ಭಾಗದ ಒಬ್ಬ ಸ್ವಯಂ ಸೇವಕ ಸದಸ್ಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಆ ಭಾಗದ ಹಣದ ಅವಶ್ಯಕತೆ ಇರುವವರ ಸದಸ್ಯರ ಹೆಸರು, ಖಾತೆ ಸಂಖ್ಯೆಯ ವಿವರಗಳನ್ನು ವಾಟ್ಸ್ ಆಪ್ ಮೂಲಕ ಸಂಘಕ್ಕೆ ಕಳುಹಿಸಬೇಕು. ಅವುಗಳನ್ನು ಸಂಘವು ಪರಿಶೀಲಿಸಿ ಸ್ವಯಂ ಸೇವಕರಿಗೆ ನಿರ್ದಿಷ್ಟ ಸಮಯದಲ್ಲಿ ಹಣ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಆಯಾ ಭಾಗದ ಸ್ವಯಂ ಸೇವಕರು ಸಂಬಂಧಿಸಿದವರಿಗೆ ವಿತರಿಸಬೇಕು.

ಒಬ್ಬ ಖಾತೆದಾರರಿಗೆ ಗರಿಷ್ಠ 5,000 ರೂಪಾಯಿ ನೀಡಲಾಗುವುದು. ಖಾತೆದಾರರು ತಮ್ಮ ಖಾತೆಗೆ ಖರ್ಚು ಹಾಕಿ ಹಣ ನೀಡುವ ಕುರಿತು ಪತ್ರವನ್ನು ಮುಂಚಿತವಾಗಿ ಸ್ವಯಂ ಸೇವಕರಿಗೆ ತಲುಪಿಸಬೇಕು. ಹಣ ತಲುಪಿದ ನಂತರ ಸಂಘದ ವೋಚರ್​ಗೆ ಸಹಿ ಹಾಕಿ ಪುನಃ ಸ್ವಯಂ ಸೇವಕರಿಗೆ ನೀಡಬೇಕು.

ವಾಟ್ಸ್ ಆಪ್​ಗೆ ಕಳುಹಿಸಿದ ಎರಡು ದಿನದಲ್ಲಿ ಹಣ ಬಟವಡೆ ವ್ಯವಸ್ಥೆ ಮಾಡಲಾಗುವುದು. ಜತೆಗೆ ಅವಶ್ಯಕ ಔಷಧ, ವಸ್ತುಗಳನ್ನು ಅದರ ಚೀಟಿ ಅಥವಾ ಔಷಧದ ಫೋಟೋವನ್ನು ವಾಟ್ಸ್ ಆಪ್​ಗೆ ಕಳುಹಿಸುವ ಮೂಲಕ ತಿಳಿಸಬಹುದು. ಇದರ ಜತೆಗೆ ಅವಶ್ಯಕ ವಸ್ತುಗಳಾದ ಪಶು ಆಹಾರ, ಅಕ್ಕಿ, ಹೆಸರು ಬೇಳೆ, ತೊಗರಿ ಬೇಳೆ, ಎಣ್ಣೆ, ಉಪ್ಪು ಇವುಗಳನ್ನು ಸಹ ಅತಿ ಅವಶ್ಯಕತೆ ಉಳ್ಳವರಿಗೆ ನೀಡಲಾಗುತ್ತಿದ್ದು, ಸ್ವಯಂ ಸೇವಕರ ಸಹಾಯದ ಮೂಲಕ ಪಡೆದುಕೊಳ್ಳಬಹುದು.

ಟಿಎಸ್​ಎಸ್ ಆಯಾ ಊರಿನ ನಿರ್ದಿಷ್ಟ ಸ್ಥಳಕ್ಕೆ ನಿರ್ದಿಷ್ಟ ಸಮಯಕ್ಕೆ ಬಂದು ಅಗತ್ಯ ವಸ್ತು ಹಾಗೂ ಹಣವನ್ನು ನೀಡಲಿದೆ. ಮುಂದಿನ ಕಾರ್ಯವನ್ನು ಸ್ವಯಂ ಸೇವಕರು ನಿರ್ವಹಿಸಬೇಕಾಗುತ್ತದೆ. ಅದೇ ಸಮಯದಲ್ಲಿ ವಸ್ತು ಹಾಗೂ ಹಣವನ್ನು ಅಗತ್ಯವಿದ್ದ ಸದಸ್ಯರು ಆ ಭಾಗದ ಸ್ವಯಂ ಸೇವಕರ ಸಹಾಯದಿಂದ ಸ್ವೀಕರಿಸಬೇಕು. ಆಯಾ ಭಾಗದ ಸ್ವಯಂ ಸೇವಕರಾಗಲು ಇಚ್ಚಿಸುವವರು ಮೊ.ನಂ. 8861478675 ಸಂರ್ಪಸಬಹುದು.

ಸಂಘವು ರೂಪಿಸಿದ ಯೋಜನೆಯು ಯಾವುದೇ ಒಬ್ಬ ಸದಸ್ಯರಿಗೆ ವೈಯಕ್ತಿಕ ಪೂರೈಕೆ ಆಗಿರುವುದಿಲ್ಲ. ಬದಲಾಗಿ ಒಂದು ಊರು ಅಥವಾ ಸನಿಹದ ಊರುಗಳಿಂದ ಗುಂಪಾಗಿ ಸ್ವಯಂ ಸೇವಕರ ಮೂಲಕ ತಿಳಿಸುವವರಿಗೆ ಮಾತ್ರ ತಲುಪಿಸುವ ವ್ಯವಸ್ಥೆಯಾಗಿದೆ.| ರವೀಶ ಹೆಗಡೆ, ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ