ಶಿರಸಿ: ಲಾಕ್ಡೌನ್ ಸಂದರ್ಭದಲ್ಲಿ ದಿನ ಬಳಕೆ ವಸ್ತುಗಳಿಗೆ ರೈತ ಸದಸ್ಯರ ಬಹುದೊಡ್ಡ ಆಶಾಕಿರಣವಾಗಿದ್ದ ಇಲ್ಲಿನ ಟಿಎಸ್ಎಸ್ ವ್ಯಾಪಾರ ಸ್ಥಗಿತಗೊಳಿಸಿದ್ದು ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ತಂದೊಡ್ಡಿದೆ.
ಲಾಕ್ ಡೌನ್ ಸಂದರ್ಭದಲ್ಲಿ ನಗರ ಭಾಗಕ್ಕಿಂತ ಗ್ರಾಮೀಣ ಭಾಗದ ಕೃಷಿಕರು, ರೈತರು, ಬಡವರನ್ನು ಕೇಂದ್ರೀಕರಿಸಿ ದಿನಸಿ ಮಾರಾಟ ಮಾಡುತ್ತಿದ್ದ ಸಂಸ್ಥೆ ತಾಲೂಕು ಆಡಳಿತದ ಸೂಚನೆ ಮೇರೆಗೆ ವಹಿವಾಟು ಸ್ಥಗಿತಗೊಳಿಸಿದ್ದು, ಗ್ರಾಮೀಣ ಜನರು ದಿನಸಿಗಾಗಿ ಪರದಾಡುವಂತಾಗಿದೆ. ಮಂಗಳವಾರ ಸಂಸ್ಥೆಯ ಪ್ರಮುಖರು ಹಾಗೂ ಉಪವಿಭಾಗಾಧಿಕಾರಿ ಡಾ. ಈಶ್ವರಿ ಉಳ್ಳಾಗಡ್ಡಿ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಅನುಮತಿಗೆ ಅವಕಾಶ ನಿರಾಕರಿಸಿ ಸರ್ಕಾರದ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ. ಅಗತ್ಯ ವಸ್ತಗಳ ಹೊರತಾದ ವಸ್ತುಗಳನ್ನು ಮಾರಾಟ ಮಾಡಿದ ಆರೋಪವಿದೆ ಎನ್ನುವುದಾಗಿ ಪುನಃ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.
ಪೇಟೆಗಳತ್ತ ಜನ: ಮನೆ ಬಾಗಿಲಿಗೆ ವಾಹನದ ಮೂಲಕ ಕಿರಾಣಿ, ದಿನಸಿ, ಕೃಷಿ ಸಂಬಂಧಿತ ಉತ್ಪನ್ನ ಸೇರಿದಂತೆ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಸ್ಥೆ ಸ್ಥಗಿತಗೊಳಿಸಿದ ಕಾರಣ ಹಳ್ಳಿಯ ಜನರು ಅಗತ್ಯ ವಸ್ತುಗಳಿಗಾಗಿ ನಗರಕ್ಕೆ ಬರುವಂತಾಗಿದೆ. ಲಾಕ್ಡೌನ್ ಆದೇಶ ಜಾರಿಯಲ್ಲಿದ್ದರೂ ಪೇಟೆ-ಪಟ್ಟಣಗಳಿಗೆ ಅನಿವಾರ್ಯವಾಗಿ ಜನರು ಬರುತ್ತಿದ್ದು, ತಾಲೂಕು ಆಡಳಿತದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಮಾನವೀಯತೆ ಮುಖ್ಯ: ಮಾರುಕಟ್ಟೆಯಲ್ಲಿ ದಿನಸಿ ಬೆಲೆ ಗಗನಕ್ಕೇರಿದಾಗಲೂ ಈವರೆಗೆ ದರ ಹೆಚ್ಚಿಸದೆ ಮನೆ ಬಾಗಿಲಿಗೆ ಸಂಸ್ಥೆ ದಿನಸಿ ತಲುಪಿಸಿದೆ. ವಾಹನ ಬಾಡಿಗೆ ಹೊರತುಪಡಿಸಿ ಉಳಿದ ವೆಚ್ಚವನ್ನು ಗ್ರಾಹಕರಿಗೆ ಭಾರವಾಗದಂತೆ ನಿಭಾಯಿಸಿದೆ. ತೊಂದರೆಗೊಳಗಾದ ಜನರಿಗೆ ಹಣಕಾಸಿನ ನೆರವು ನೀಡಿದ್ದಲ್ಲದೇ, ಬೆಳೆಗಾರರ ಹಿತ ಕಾಯಲು ನೇರ ಅಡಕೆ ಖರೀದಿ ಆರಂಭಿಸಿದೆ. ಜನಪರವಾಗಿ ನಡೆಯುತ್ತಿರುವ ಸಂಸ್ಥೆಯ ಮೇಲೆ ಕೆಲವರು ಹೊರಿಸಿದ ಆರೋಪ ಇದೀಗ ಗ್ರಾಮೀಣ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ಹೀಗಾಗಿ ಕಾನೂನಿಗಿಂತಲೂ ಮಿಗಿಲಾಗಿ ಮಾನವೀಯ ನೆಲೆಯಡಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹಾರ್ಸಿಕಟ್ಟಾ, ವಾಜಗದ್ದೆ, ಹೇರೂರು, ನಾಣಿಕಟ್ಟಾ, ರೇವಣಕಟ್ಟಾ, ದೇವನಳ್ಳಿ, ಬೆಣಗಾಂವ, ವಾನಳ್ಳಿ, ಹುಲೇಕಲ್, ಭೈರುಂಬೆ, ಬನವಾಸಿ, ಉಂಚಳ್ಳಿ ಸೇರಿ ಹಲವು ಗ್ರಾಮೀಣ ಪ್ರದೇಶದ ಜನರು ‘ವಿಜಯವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಘಟ್ಟದ ಮೇಲಿನ ಗ್ರಾಮೀಣ ಜನರ ಜೀವನಾಡಿಯಾದ ಟಿಎಸ್ಎಸ್ಅನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿರುವುದು ಸರಿಯಲ್ಲ. ನಿತ್ಯದ ವಸ್ತುಗಳಿಗೆ ಪರದಾಡುವ ಸಂದರ್ಭದಲ್ಲಿ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ ಸಂಸ್ಥೆಗೆ ಮತ್ತೆ ಬಾಗಿಲು ತೆರೆಯಲು ಅನುಮತಿ ನೀಡಬೇಕು. | ಕೃಷ್ಣಮೂರ್ತಿ ಹೆಗಡೆ ಯಡಳ್ಳಿ ಗ್ರಾಹಕ
ಕರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದವರು ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮನೆಮನೆಗೆ ದಿನಸಿ ನೀಡುತ್ತಿದ್ದ ಟಿಎಸ್ಎಸ್ ಪ್ರಮುಖ ಕಾರಣ. ಮಾನವೀಯ ನೆಲೆಯಲ್ಲಿ ಮತ್ತೆ ಸಂಸ್ಥೆಯ ಬಾಗಿಲು ತೆರೆಯಲು ಸ್ಥಳೀಯ ಆಡಳಿತ ವರ್ಗ ಅವಕಾಶ ಕಲ್ಪಿಸಬೇಕು. | ವಿಘ್ನೕಶ ಗೌಡ ಕೌಲದ್ದ ಗ್ರಾಮೀಣ ಭಾಗದ ನಿವಾಸಿ
ಅಗತ್ಯ ವಸ್ತುಗಳನ್ನು ಮಾರಲು ಮಾತ್ರ ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಅದರ ಹೊರತಾಗಿ ಕೃಷಿ ಸಂಬಂಧಿತ ಸಲಕರಣೆ, ಯಂತ್ರೋಪಕರಣ, ಬಟ್ಟೆ ಸೇರಿದಂತೆ ಇತರ ವಸ್ತುಗಳ ಮಾರಾಟ ಮಾಡದಂತೆ ಹೇಳಲಾಗಿದೆ. ಈ ಎಲ್ಲ ವಿಷಯಗಳ ಕುರಿತು ಟಿಎಸ್ಎಸ್ ಜತೆ ರ್ಚಚಿಸಲು ಏ.22ರಂದು ವಿಧಾನಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಉಳಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ಕುರಿತು ಸಭೆ ನಿರ್ಣಯಿಸಲಿದೆ. | ಡಾ. ಈಶ್ವರ ಉಳ್ಳಾಗಡ್ಡಿ ಉಪವಿಭಾಗಾಧಿಕಾರಿ