ಹುಬ್ಬಳ್ಳಿ: ಬ್ಯಾಟರ್ ಪ್ರಥೀತ್ ಜಂಬಗಿ ಅರ್ಧ ಶತಕ (55ರನ್, 63ಎ, 7 ಬೌಂ.,) ಹಾಗೂ ಅಕ್ಷಯ (13ಕ್ಕೆ 3 ವಿಕೆಟ್) ಅತ್ಯುತ್ತಮ ಬೌಲಿಂಗ್ ನಿರ್ವಹಣೆಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಧಾರವಾಡ ವಲಯದ 16 ವಯೋಮಿತಿ ಅಂತರ್ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಹುಬ್ಬಳ್ಳಿಟ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್ಸಿಎ) ಎ ತಂಡ ಚಾಂಪಿಯನ್ ಆಗಿದೆ.
ಬೆಳಗಾವಿಯಲ್ಲಿ ಸೋಮವಾರ ಫೈನಲ್ ಪಂದ್ಯದಲ್ಲಿ ಟಿಎಸ್ಸಿಎ ಎ ತಂಡ, ಆನಂದ ಕ್ರಿಕೆಟ್ ಕೋಚಿಂಗ್ ಅಕಾಡಮಿ ಎ ತಂಡದ ವಿರುದ್ಧ 108ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.
ಟಿಎಸ್ಸಿಎ ಎ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 50ಓವರ್ಗಳಲ್ಲಿ 8ವಿಕೆಟ್ಗೆ 246ರನ್ ಗಳಿಸಿತ್ತು. ಪ್ರಥೀತ್ ಜಂಬಗಿ 55, ಅರ್ಜುನ ಗೋಟೆ 44, ಹರ್ಷಿತಗೌಡಾ 46, ಎ.ಆರ್. ಸಮಿತ 49 ರನ್ ಗಳಿಸಿದರು ಉತ್ತಮ ಮೊತ್ತಕ್ಕೆ ಕಾರಣರಾದರು.
ನಂತರ ಬ್ಯಾಟಿಂಗ್ ಮಾಡಿದ ಆನಂದ ಕ್ರಿಕೆಟ್ ಕೋಚಿಂಗ್ ಅಕಾಡಮಿ ಎ ತಂಡ 44 ಓವರ್ಗಳಲ್ಲಿ 138 ರನ್ ಗೆ ಆಲೌಟ್ ಆಗಿ ಸೋಲು ಅನುಭವಿಸಿತು. ತಂಡದ ಪರ ಹೈದರಲಿ ಸೈಯದ್ 87 ರನ್ ಗಳಿಸಿದರು. ಟಿಎಸ್ಸಿಎ ಪರ ಅಕ್ಷಯ (13ಕ್ಕೆ3), ಹರ್ಷಿತಗೌಡ (30ಕ್ಕೆ2), ಅಸಹಜ್ ಸೌದಾಗರ (17ಕ್ಕೆ2), ಶಿವಂ ಕಾಟವೆ (0ಕ್ಕೆ2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.