ಮೂಡಿಗೆರೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಕಣ ಬಿರುಸುಗೊಂಡಿದೆ. ನ.2ರಂದು ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಘೋಷಣೆಯಾಗಿ ಚುನಾವಣೆ ಎದುರಿಸಲು ರಣತಂತ್ರ ರೂಪಿಸಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಜೆಡಿಎಸ್ ಎರಡು ಬಣಗಳು ಮೈತ್ರಿ ಮಾಡಿಕೊಂಡಿರುವುದು ಚುನಾವಣೆಯಲ್ಲಿ ಕುತೂಹಲ ಹೆಚ್ಚಾಗಲು ಕಾರಣವಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ನೇತೃತ್ವದಲ್ಲಿ ನಾಲ್ವರು ಜೆಡಿಎಸ್ ಮತ್ತು ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ಒಂದು ಗುಂಪಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಕೂಡ ಜೆಡಿಎಸ್ ನಾಯಕರನ್ನು ಗುಂಪಿಗೆ ಸೇರಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದೆ. ಒಟ್ಟು 1043 ಮತದಾರರಿದ್ದಾರೆ. ಸಾಮಾನ್ಯ 2, ಸಾಮಾನ್ಯ ಮಹಿಳೆ 2, ಹಿಂದುಳಿದ ವರ್ಗ ಎ ಮತ್ತು ಬಿ ತಲಾ 1, ಪ.ಜಾತಿ 1, ಪ.ಪಂಗಡ 1, ಒಟ್ಟು 8 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಮೈತ್ರಿಕೂಟದಿಂದ ಪಿ.ಜಿ.ಅನುಕುಮಾರ್, ಎಚ್.ಎಸ್.ಮಂಜುನಾಥ್, ಎಂ.ಕೆ.ಚಂದ್ರೇಶ್, ಪುಟ್ಟಮ್ಮ ಚಂದ್ರೇಗೌಡ, ಬಿ.ಎಲ್.ವಿದ್ಯಾ ರಾಜು, ಟಿ.ಎ.ಶೇಖರ್ ಪೂಜಾರಿ, ಕೆ.ಬಿ.ಗಣೇಶ್, ರಮೇಶ್ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗುಂಪಿನ ಅಭಿವೃದ್ಧಿ ವೇದಿಕೆಯಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಕೆ.ಪಿ.ಭಾರತಿ, ಎಂ.ಎಂ.ಲಕ್ಷ್ಮಣ ಗೌಡ, ಎಂ.ಎಸ್.ಅನಂತ್, ಯು.ಎಚ್.ಹೇಮಶೇಖರ್, ಶಾಂತಲಾ ನಾಗೇಶ್, ಸುರೇಶ್, ಎಂ.ಎನ್.ಮನು ಕಣಕ್ಕಿಳಿದಿದ್ದಾರೆ. ರಂಜನ್ ಅಜಿತ್‌ಕುಮಾರ್ ಬಣ ಕಾಂಗ್ರೆಸ್‌ನೊಂದಿಗೆ ಹಾಗೂ ಜೆಡಿಎಸ್ ಇನ್ನೊಂದು ಗುಂಪು ಬಿಜೆಪಿಯೊಂದಿಗೆ ಕಣಕ್ಕಿಳಿದಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಎರಡೂ ತಂಡಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಮೂರೂ ಪಕ್ಷಗಳ ಮುಖಂಡರು ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.