ಜಿಲ್ಲೆ

ಟಿಇಟಿ ಪರೀಕ್ಷೆಗೆ 6 ಸಾವಿರ ಅಭ್ಯರ್ಥಿಗಳು ಹಾಜರು

ಮೈಸೂರು: ಜಿಲ್ಲೆಯಲ್ಲಿ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ 6 ಸಾವಿರ ಆಕಾಂಕ್ಷಿಗಳು ಪರೀಕ್ಷೆ ಎದುರಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಸಾರ್ವಜನಿಕ ಶಿಕ್ಷಣ ಇಲಾಖೆ)ಯಿಂದ ಆಯೋಜಿಸಿದ್ದ ಒಂದರಿಂದ 8ನೇ ತರಗತಿವರೆಗೆ ಶಿಕ್ಷಕರ ನೇಮಕ ಅರ್ಹತೆಗಾಗಿ ಒಟ್ಟು 8 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 7,163 ಅಭ್ಯರ್ಥಿಗಳ ಪೈಕಿ 6,453 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 683 ಅಭ್ಯರ್ಥಿಗಳು ಗೈರಾಗಿದ್ದರು. ಬೆಳಗ್ಗೆ 1ರಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲೆಗೆ ಮಧ್ಯಾಹ್ನ 6ರಿಂದ 8ನೇ ತರಗತಿವರೆಗೆ ಪರೀಕ್ಷೆ ನಡೆಯಿತು.
ಡಿಡಿಪಿಐ ರಾಮಚಂದ್ರರಾಜೇ ಅರಸ್ ಮಾತನಾಡಿ, ಎರಡು ಪತ್ರಿಕೆಗಳು 150 ಪ್ರಶ್ನೆಗಳನ್ನು ಒಳಗೊಂಡಿದ್ದವು. ಅರ್ಹತೆ ಪಡೆಯಲು ಅಭ್ಯರ್ಥಿಗಳು ಶೇ.60 ಅಂಕ ಪಡೆಯಬೇಕು. 150 ಅಂಕಗಳಿಗೆ 90 ಅಂಕ ಪಡೆಯಬೇಕು. 2022ರಲ್ಲಿ ಪಡೆದ ಶಿಕ್ಷಕರ ಅರ್ಹತಾ ಪ್ರಮಾಣಪತ್ರವೂ 7 ವರ್ಷಗಳವರೆಗೆ ಮಾನ್ಯತೆ ಇರುತ್ತದೆ ಎಂದು ತಿಳಿಸಿದರು.
ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ಯಾವುದೇ ನಕಲಿಗೆ ಅವಕಾಶ ನೀಡದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಯಾವುದೇ ಲೋಪವಿಲ್ಲದಂತೆ ಪರೀಕ್ಷೆ ನಡೆಸಲು ನಗರಪಾಲಿಕೆಯ 7 ವಲಯ ಆಯುಕ್ತರು, ಮೂವರು ನೋಡಲ್ ಅಧಿಕಾರಿಗಳನ್ನು ಪರೀಕ್ಷಾ ಮೇಲುಸ್ತುವಾರಿಗೆ ನೇಮಿಸಲಾಗಿತ್ತು. ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದು ಪರೀಕ್ಷಿಸಿದರು ಎಂದು ಹೇಳಿದರು.