ಮೈಸೂರು: ಕನ್ನಡ ನಾಟಕ ರಂಗದಲ್ಲಿ ಹೊಸ ಶಕೆ ಆರಂಭಿಸಿದ ಟಿ.ಪಿ.ಕೈಲಾಸಂ ಕೃತಿಗಳ ಓದುವುದು ಮತ್ತು ಅವರ ನಾಟಕಗಳ ಪ್ರದರ್ಶನ ಮಾಡುವುದು ಅಗತ್ಯವಾಗಿದೆ ಎಂದು ಚಾಮರಾಜನಗರದ ರಂಗಕರ್ಮಿ ಕೆ.ವೆಂಕಟರಾಜು ತಿಳಿಸಿದರು.
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ವತಿಯಿಂದ ಹಾರ್ಡ್ವಿಕ್ ಪಿಯು ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕೈಲಾಸಂ - ಒಂದು ವಿಲಕ್ಷಣ ಪ್ರತಿಭೆ ಚರ್ಚೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೈಲಾಸಂ ಕಳೆದ ಶತಮಾನದಲ್ಲಿ ಬದುಕಿದ್ದ ಅಸಾಮಾನ್ಯ ಪ್ರತಿಭಾವಂತ, ನಾಟಕಕಾರ, ನಟ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದ ಅನನ್ಯ ಲೇಖಕ. ಅವರು ತಮ್ಮ ನಾಟಕಗಳಲ್ಲಿ, ಬರಹಗಳಲ್ಲಿ ಬಿತ್ತಿದ ಪ್ರಶ್ನೆಗಳು ಇಂದಿಗೂ ಚರ್ಚೆ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದರು.
ಕನ್ನಡ ನಾಟಕಗಳಿಗಿಂತ ಆಂಗ್ಲ ಭಾಷಾ ನಾಟಕಗಳು ಜಾಗತಿಕವಾಗಿ ಪ್ರದರ್ಶನಗೊಳ್ಳುತ್ತಿವೆ. ಕೈಲಾಸಂ ಅವರ ಐದಾರು ನಾಟಕಗಳ ದುರಸ್ತಿ ಮಾಡಿದರೆ ಅವುಗಳನ್ನೂ ನಾಟಕ ಮಾಡಬಹುದು. ಆದ್ದರಿಂದ ಕೈಲಾಸಂ ಅವರನ್ನು ಮತ್ತೆ ಓದುವ ಅಗತ್ಯವಿದೆ ಎಂದರು.
ಲೇಖಕ ಬಿ.ಆರ್.ಮಂಜುನಾಥ್ ಮಾತನಾಡಿ, ಕೈಲಾಸಂ ಅವರ ಬಗ್ಗೆ ಬಂದಿರುವ ಅವರ ಸಮಕಾಲೀನ ವಿಮರ್ಶೆಯಲ್ಲಿ ಅವರ ಪ್ರತಿಭೆಗೆ ಆದ್ಯತೆ ಕೊಡಲಾಗಿದೆ. ಅವರ ಮಾತುಗಾರಿಕೆಗೆ ಬೆರಗಾಗಿರುವಂತಹ ಕ್ಷಣಗಳಿವೆ. ಅವರ ತ್ಯಾಗದ ಹುಮ್ಮಸ್ಸಿನಿಂದ ಪ್ರಭಾವಕ್ಕೆ ಒಳಗಾಗಿರುವವರೂ ಇದ್ದಾರೆ ಎಂದು ತಿಳಿಸಿದರು. ರಂಗ ನಿರ್ದೇಶಕ ಹೆಗ್ಗೋಡು ಪ್ರಸನ್ನ, ನಾಟಕಕಾರ ಶಶಿಧರ ಡೋಂಗ್ರೆ ಇತರರಿದ್ದರು.