ಜಿಲ್ಲೆ

ಟಾರ್​ ಪ್ಲಾಂಟ್​ ಬಂದ್​ ಮಾಡುವಂತೆ ಒತ್ತಾಯ

ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ರಾಜ್ಯ ಹೆದ್ದಾರಿ 85ರಲ್ಲಿ ಹಸಿಗೆಹೊಬಳಿ (ರಾಜೇಂದ್ರಪುರ) ಗ್ರಾಮದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಇರುವ ಟಾರ್​ ಪ್ಲಾಂಟ್​ನಿಂದ ಉತ್ಪತ್ತಿಯಾಗುವ ಧೂಳಿನಿಂದ ಅಕ್ಕಪಕ್ಕದ ರೈತರು ಕಂಗಾಲಾಗಿದ್ದಾರೆ. ರೇಷ್ಮೆ, ತೆಂಗು, ಅಡಕೆ, ಮಾವಿನ ಬೆಳೆಗಳು ಧೂಳಿನಿಂದ ಹಾಳಾಗಿದ್ದು, ಈ ಬಗ್ಗೆ ತಹಸೀಲ್ದಾರ್​, ಪೊಲೀಸ್​, ಸ್ಥಳಿಯ ಗ್ರಾಮ ಪಂಚಾಯಿತಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಎರಡು ವರ್ಷಗಳಿಂದ ದೂರು ನೀಡುತ್ತಿದ್ದರೂ ಪರಿಹಾರ ಕಲ್ಪಿಸಿಲ್ಲ ಎಂದು ಸ್ಥಳಿಯರಾದ ಕುಮಾರ್​, ವರದರಾಜು, ಚಲುವರಾಜು, ಸತೀಶ್​, ಪುಟ್ಟಸ್ವಾಮಿ, ಚಂದ್ರಯ್ಯ ಅಲವತ್ತುಕೊಂಡಿದ್ದಾರೆ. ಈ ಅನಧಿಕೃತ ಟಾರ್​ ಪ್ಲಾಂಟ್​ನಿಂದಾಗಿ ಬೆಳೆಗಳು ಕೈ ಸೇರದಂತಾಗಿದೆ. ಯಾವುದೇ ಪರವಾನಗಿ ಇಲ್ಲದೆ ಎರಡು ವರ್ಷಗಳಿಂದ ತೆರಿಗೆ ವಂಚಿಸಿ ಅಕ್ರಮವಾಗಿ ನಡೆಯುತ್ತಿರುವ ಟಾರ್​ಪ್ಲಾಂಟ್​ ಮುಚ್ಚಿಸಿ, ಹಾಳಾಗಿರುವ ಬೆಳೆ ನಷ್ಟವನ್ನು ತುಂಬಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ರಾಜೇಂದ್ರಪುರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಟಾರ್​ ಪ್ಲಾಂಟ್​ನಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಮಿಶ್ರಿತ ಹೊಗೆಯ ಕಾರಣದಿಂದ ಸ್ಥಳಿಯರಲ್ಲಿ ಕಾಯಿಲೆ ಭೀತಿ ಎದುರಾಗಿದೆ. ರಾತ್ರಿ ವೇಳೆಯಲ್ಲಿ ನಡೆಯುತ್ತಿದ್ದ ಟಾರ್​ಪ್ಲಾಂಟ್​ ಈಗ ಹಗಲಿನಲ್ಲಿ ನಡೆಯುತ್ತಿರುವ ಕಾರಣ ರಾಜ್ಯ ಹೆದ್ದಾರಿ 85ರಲ್ಲಿ ಓಡಾಡುವ ವಾಹನ ಸವಾರರಿಗೆ ಸಮಸ್ಯೆಯಾಗಿದ್ದು, ಧೂಳು ಕುಡಿದುಕೊಂಡು ಓಡಾಡುವ ಸ್ಥಿತಿ ನಿಮಾರ್ಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅನಧಿಕೃತವಾಗಿ ನಡೆಯುತ್ತಿರುವ ಟಾರ್​ಪ್ಲಾಂಟ್​ ಮುಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.