ಹಾಸನ: ನಗರದ ಹಳೇ ಬಸ್ ನಿಲ್ದಾಣದ ಪಕ್ಕ ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಆ ಸ್ಥಳವನ್ನು ಸುಗಮ ಸಂಚಾರಕ್ಕೆ ಮೀಸಲಿಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹೃದಯ ಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ಜಾಗ ಈ ಹಿಂದೆ ಟಾಂಗ ನಿಲ್ದಾಣವಾಗಿತ್ತು. ಅದರಲ್ಲಿ 5-6 ಕುದುರೆ ಗಾಡಿಗಳನ್ನು ಕಟ್ಟಲಾಗುತ್ತಿತ್ತು. ನಗರ ಬೆಳದಂತೆ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಿಟಿ ಬಸ್ ನಿಲ್ದಾಣದ ಪಕ್ಕ ವಾಹನ ದಟ್ಟಣೆ ತುಂಬಾ ಹೆಚ್ಚಾಗಿದೆ. ಟಾಂಗಾ ನಿಲ್ದಾಣದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಕುದುರೆ ಗಾಡಿಗಳಿದ್ದು, ಅದರ ಉಪಯೋಗ ಈಗ ಯಾರು ಮಾಡುತ್ತಿಲ್ಲ. ಕೇವಲ ಕುದುರೆಗಳನ್ನು ಟಾಂಗಾಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ. ಆ ಸ್ಥಳದಲ್ಲಿ ಜೂಜು, ಮಟ್ಕಾ ಮತ್ತು ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ ಎಂದು ದೂರಿದರು.
ಮೈಸೂರಿನಲ್ಲಿರುವ ಕುದುರೆ ಗಾಡಿಗಳು ತುಂಬಾ ಚೆನ್ನಾಗಿದ್ದು, ನಗರದ ಸುತ್ತ ಓಡಾಡಲು ಕುದುರೆ ಗಾಡಿಗಳನ್ನು ಬಳಸುವುದು ಉಂಟು. ಆದರೆ ಹಾಸನದಲ್ಲಿ ಕುದುರೆ ಗಾಡಿಗಳನ್ನು ಕೇವಲ ಸರಕು ಸಾಮಗ್ರಿಗಳ ಸಾಗಾಣಿಕೆಗೆ ಮಾತ್ರ ಬಳಸಲಾಗುತ್ತಿದೆ. ಆದ್ದರಿಂದ ಕುದುರೆ ಗಾಡಿಗಳ ಅವಶ್ಯಕತೆ ಇಂದಿನ ದಿನದಲ್ಲಿ ಇಲ್ಲ ಮತ್ತು ಸಿಟಿ ಬಸ್ ನಿಲ್ದಾಣದ ಪಕ್ಕ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಆ ಸ್ಥಳದಲ್ಲಿ ರಸ್ತೆಯನ್ನು ಅಗಲ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವೇ ಪಾಕಿರ್ಂಗ್ ವ್ಯವಸ್ಥೆಗೆ ಬಳಸಿಕೊಳ್ಳುವುದು ಸೂಕ್ತ ಎಂಬುದು ನಾಗರಿಕರ ಅಭಿಪ್ರಾಯ ಎಂದರು.
ಈಗ ಟಾಂಗಾ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡ ಮೂಲ ನಕ್ಷೆಯ ಪ್ರಕಾರ ಇಲ್ಲ. ಕುದುರೆ ನಿಲ್ಲಿಸುವ ಜಾಗದಲ್ಲಿ ಕಿಟಕಿಗಳಿರಬೇಕು. ಕಿಟಕಿಗಳ ವ್ಯವಸ್ಥೆಯನ್ನೂ ಕೂಡ ಮಾಡಿಲ್ಲ. ಮತ್ತು ಟಾಂಗಾ ನಿಲ್ದಾಣದ ಮೇಲೆ ಮತ್ತೊಂದು ಮಹಡಿಯನ್ನು ಮಾಡಿ ಅಲ್ಲಿ ವಾಣಿಜ್ಯ ಮಳಿಗೆಗಳನ್ನು ಮಾಡುವುದು ಮತ್ತು ಕಟ್ಟಡದ ವಿನ್ಯಾಸವನ್ನು ಗುಂಬಜ್ ರೀತಿಯಲ್ಲಿ ಮಾಡಿ ಅದಕ್ಕೆ ಟಿಪ್ಪು ಸುಲ್ತಾನ್ ಟಾಂಗಾ ನಿಲ್ದಾಣ ಎಂದು ಹೆಸರಿಡಲಾಗುವುದು ಎಂಬುದನ್ನು ಸ್ಥಳೀಯ ರಸ್ತೆ ಬದಿ ವ್ಯಾಪಾರಸ್ಥರು, ಸಾರ್ವಜನಿಕರು ತಿಳಿಸಿದ್ದಾರೆ ಎಂದು ಆರೋಪಿಸಿದರು.
ಮೂಲ ನಕ್ಷೆಯ ಪ್ರಕಾರ ಟಾಂಗಾ ನಿಲ್ದಾಣಕ್ಕೆ ನೀಡಿರುವ ಸ್ಥಳಕ್ಕಿಂತ ಹೆಚ್ಚು ಸ್ಥಳವನ್ನು ಬಳಸಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ, ನಗರಸಭೆಯ ಹೆಚ್ಚುವರಿ ಜಾಗವನ್ನು ಬಳಸಲು ಅವರಿಗೆ ಅನುಮತಿ ನೀಡಿದವರು ಯಾರು? ಟಾಂಗಾ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಿ, ಆ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ರಸ್ತೆ ಅಗಲೀಕರಣ ಅಥವಾ ಪಾಕಿರ್ಂಗ್‌ಗೆ ಮೀಸಲಿಡಬೇಕಾಗಿ ಹಾಸನ ನಗರ ಬಿಜೆಪಿ ಆಗ್ರಹಿಸುತ್ತದೆ. ತಾವುಗಳು ಮೇಲೆ ಹೇಳಿರುವ ಅಂಶಗಳನ್ನು ಗಮನಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಈ ಕೂಡಲೇ ನಿಲ್ಲಿಸಲು ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿ ಆಗ್ರಹಿಸಿ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ನಗರಸಭೆ ಸದಸ್ಯ ರಕ್ಷಿತ್, ದಯಾನಂದ್, ನಾಗೇಶ್, ನಾರಾಯಣ್, ಚನ್ನಕೇಶವ, ವಕ್ತಾರರಾದ ದೇವರಾಜೇಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಪ್ರಕಾಶ್, ವೇದಾವತಿ, ಲಾವಣ್ಯಾ, ವಿಜಯಲಕ್ಷ್ಮೀ ಅಂಜನಪ್ಪ ಇತರರು ಪಾಲ್ಗೊಂಡಿದ್ದರು.