ಜಿಲ್ಲೆ

ಟಮಕ ಬಡಾವಣೆಗೆ ಕಾಯಕಲ್ಪ, ಕೂಡಾ ಅಧ್ಯಕ್ಷರ ಸಂಕಲ್ಪ

ಪಾ.ಶ್ರೀ.ಅನಂತರಾಮ್​ ಕೋಲಾರ

ಕೂಡಾ ಅಧ್ಯಕ್ಷ ವಿಜಯಕುಮಾರ್​ ಅಧ್ಯಕ್ಷತೆಯಲ್ಲಿ ಇಂದು ಪ್ರಾಧಿಕಾರದ ಸಭೆ ನಡೆಯಲಿದ್ದು, ಮೂಲಸೌಕರ್ಯಗಳಿಗೆ ಅನುಮೋದನೆ ಸಿಗುವ ಸಂಭವ ಹೆಚ್ಚಿದೆ.

ಮೂವತ್ತೊಂದು ವರ್ಷಗಳ ಹಿಂದೆ ರಚನೆಯಾಗಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ)ದ ಅಧೀನಕ್ಕೆ ಒಳಪಟ್ಟಿರುವ ಟಮಕದ ದೇವರಾಜ ಅರಸು ಬಡಾವಣೆಗೆ ಕಾಯಕಲ್ಪ ನೀಡಲು ಪ್ರಾಧಿಕಾರದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ಜಿಜ್ಞಾಸೆ ಉಂಟು ಮಾಡಿದೆ.

1991ರಲ್ಲಿ ಟಮಕದಲ್ಲಿ ಬಡಾವಣೆ ನಿರ್ಮಿಸಲು ತೀರ್ಮಾನಿಸಲಾಯಿತು. 6 ವರ್ಷಗಳ ಸತತ ಪ್ರಯತ್ನದಿಂದಾಗಿ 1996ರಲ್ಲಿ 121.6 ಎಕರೆ ಜಮೀನನ್ನು ಬಡಾವಣೆಯಾಗಿ ರಚಿಸಿ 1426 ನಿವೇಶನಗಳನ್ನು ವಿಲೇವಾರಿ ಮಾಡಲಾಗಿದೆ.

ಆದರೆ 31 ವರ್ಷಗಳಲ್ಲಿ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಮನೆ ಮತ್ತು ಕಟ್ಟಡಗಳ ಸಂಖ್ಯೆ 150 ಮಾತ್ರ. ಇನ್ನೂ 1276 ನಿವೇಶನಗಳಿದ್ದು, ಅಭಿವೃದ್ಧಿ ಕಾಣದಿರುವುದರಿಂದ ಕಾಡಿಗಿಂತ ಅಧ್ವಾನವಾಗಿದೆ.

ಬಡಾವಣೆಯ ಬ್ಲಾಕ್​ 1ರಲ್ಲಿ ತಕ್ಕ ಮಟ್ಟಿಗೆ ರಸ್ತೆ, ಚರಂಡಿ, ಬೀದಿ ದೀಪದ ವ್ಯವಸ್ಥೆಯಿದ್ದು ಉಳಿದ ಪ್ರದೇಶ ರ್ನಿಜನವಾಗಿರುವುದರಿಂದ ಹಾವುಗಳ ಕಾಟ ಹೆಚ್ಚಾಗಿದೆ. ರಸ್ತೆ, ಚರಂಡಿ, ನೀರು, ಬೀದಿದೀಪ, ಸ್ವಚ್ಛತೆ ಇಲ್ಲದಿರುವುದರಿಂದ ಜನರು ನೆಮ್ಮದಿಯಿಂದ ಜೀವಿಸುವುದು ದುಸ್ತರವಾಗಿದೆ.

31 ವರ್ಷಗಳ ಅವಧಿಯಲ್ಲಿ ಪ್ರಾಧಿಕಾರಕ್ಕೆ ಏಳೆಂಟು ಜನ ಅಧ್ಯಕ್ಷರಾಗಿದ್ದಾರೆ, ಆದರೂ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿಲ್ಲ. ಈ ಹಿಂದೆ ಅಧ್ಯಕ್ಷರಾಗಿದ್ದ ಓಂಶಕ್ತಿ ಚಲಪತಿ ಅವರು ಟಮಕ ಬಡಾವಣೆಯಲ್ಲಿದ್ದ ನಿವೇಶನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ನಿರ್ಧರಿಸಿದ್ದರು, ಸಿಎ ಸೈಟ್​ಗಳನ್ನು ಗುರುತಿಸಿ ಅವುಗಳನ್ನು ಯಾರೂ ಕಬಳಿಕೆ ಮಾಡದಂತೆ ಬೇಲಿ ಹಾಕಿದ್ದಾರೆ. ಆದರೆ ಬಡಾವಣೆಗೆ ಅಗತ್ಯ ಸವಲತ್ತು ಕಲ್ಪಿಸಲು ಎರಡು ವರ್ಷ ಕರೊನಾ ಅಡ್ಡಿಯಾಗಿತ್ತು. ಪ್ರಯತ್ನ ಮುಂದುವರಿಸುವಷ್ಟರಲ್ಲಿ ಅಧಿಕಾರ ಕಳೆದುಕೊಂಡಿದ್ದು, ಈಗ ಹೊಸ ಅಧ್ಯಕ್ಷ ವಿಜಯಕುಮಾರ್​ ಕಾಯಕಲ್ಪ ನೀಡುವುದು ಸವಾಲಾಗಿದೆ.

ಬಡಾವಣೆಯಲ್ಲಿ 8 ಉದ್ಯಾನವನಗಳಿಗಾಗಿ ನಿವೇಶನ ಕಾದಿರಿಸಲಾಗಿದ್ದು, ಒಂದು ಕಡೆ ಉದ್ಯಾನವನ ನಿರ್ಮಿಸಲಾಗಿದೆ. ಉದ್ಯಾನವನವನ್ನು ನಗರಸಭೆ ನಿರ್ವಹಣೆ ಮಾಡುತ್ತಿದ್ದು, ಇನ್ನಷ್ಟು ಸೌಕರ್ಯಗಳು ಬೇಕಾಗಿದೆ.

ಜಿಲ್ಲಾ ಪೊಲೀಸ್​ ಕಚೇರಿ ಸಮೀಪ 2 ಎಕರೆ ಜಾಗವನ್ನು ಉದ್ಯಾನವನಕ್ಕಾಗಿ ಮೀಸಲಿಟ್ಟು, ಕಾಂಪೌಂಡ್​ ಹಾಕಲಾಗಿದೆ. ಖಾಲಿ ಜಾಗ ಕಬಳಿಕೆ ಮಾಡುವುದನ್ನು ತಡೆಯಲು ಗಿಡಗಳನ್ನು ಬೆಳೆಸಲಾಗಿದೆ. ಈ ಉದ್ಯಾನವನದ ಅಭಿವೃದ್ಧಿ ವಿಚಾರವಾಗಿ ಮೇ 27ರಂದು ವಿಜಯಕುಮಾರ್​ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಸಭೆಯಲ್ಲಿ ಒಪ್ಪಿಗೆ ಪಡೆಯುವ ನಿರೀೆಯಿದೆ.

ಬಡಾವಣೆಯಲ್ಲಿ ನೀರಿನ ವ್ಯವಸ್ಥೆಗಾಗಿ 4 ಕೊಳವೆಬಾವಿ ಕೊರೆಸಲಾಗಿದ್ದು, ಎಲ್ಲ ಬಾವಿಗಳು ನಿಷ್ಕ್ರಿಯವಾಗಿವೆ. ಜನರ ಕಷ್ಟ ಅರಿತು ಟ್ಯಾಂಕರ್​ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ನೀರಿನ ಸಮಸ್ಯೆ ನಿವಾರಣೆ ಹಾಗೂ ಇತರ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ 4.30 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲು ಪ್ರಾಧಿಕಾರ ಸಜ್ಜಾಗಿದೆ.

ಮುಖ್ಯವಾಗಿ ಬಡಾವಣೆಯಲ್ಲಿ ರಸ್ತೆಗಳು ಅಭಿವೃದ್ಧಿ ಕಾಣಬೇಕಿದೆ, ಶೇ. 50ಕ್ಕೂ ಹೆಚ್ಚು ಪ್ರದೇಶದಲ್ಲಿ ಚರಂಡಿಗಳು ಗಿಡ ಗಂಟಿಗಳಿಂದ ಮುಚ್ಚಿವೆ. ಶೇ.70 ಪ್ರದೇಶದಲ್ಲಿ ಬೀದಿ ದೀಪಗಳಿಲ್ಲದಂತಾಗಿದೆ.

ಹಣವಿದ್ದರೂ ಅಭಿವೃದ್ಧಿ ಕಂಡಿಲ್ಲ: ಪ್ರಾಧಿಕಾರದ ಖಾತೆಯಲ್ಲಿ ಪ್ರಸ್ತುತ 16 ಕೋಟಿ ರೂ. ಹಣವಿದ್ದರೂ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದು ರತ್ನಗಿರಿ ರಹಸ್ಯದಂತಾಗಿದೆ. ಪ್ರಾಧಿಕಾರಕ್ಕೆ ಸರ್ಕಾರದಿಂದ ಬಿಡಿಗಾಸು ಅನುದಾನ ಸಿಗದಿದ್ದರೂ ಆದಾಯಕ್ಕೆ ಕೊರತೆಯಿಲ್ಲ. ಸಿಬ್ಬಂದಿ ವೇತನ, ಆಡಳಿತ ಮಂಡಳಿ ಸಂಭಾವನೆ, ಇತರ ಖರ್ಚು&ವೆಚ್ಚಗಳನ್ನು ಪ್ರಾಧಿಕಾರದಿಂದ ಭರಿಸಲಾಗುತ್ತಿದೆ. ಇರುವ ಹಣದಲ್ಲಿ ಕನಿಷ್ಠ 12 ಕೋಟಿ ರೂ.ಗಳನ್ನು ಬಡಾವಣೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿದಲ್ಲಿ ಇನ್ನಷ್ಟು ಕಂದಾಯ ಕ್ರೋಡಿಕರಿಸಬಹುದು ಎಂಬುದು ಕಚೇರಿ ಸಿಬ್ಬಂದಿ ಅನಿಸಿಕೆ.

ಸಿಬ್ಬಂದಿ ಕೊರತೆ: ಬಡಾವಣೆಯಲ್ಲಿ ವಿಲೇವಾರಿಯಾಗದಿರುವ 391 ನಿವೇಶನಗಳಿದ್ದು, ಇವುಗಳನ್ನು ಹರಾಜು ಹಾಕಿದಲ್ಲಿ ಪ್ರಾಧಿಕಾರಕ್ಕೆ ಕನಿಷ್ಠ 50 ರಿಂದ 60 ಕೋಟಿ ರೂ.ಆದಾಯ ಸಿಗಲಿದೆ. ಅಗತ್ಯ ಸಿಬ್ಬಂದಿ ಕೊರತೆ ಇರುವುದರಿಂದ ಜನರ ನಿರೀೆಗೆ ತಕ್ಕಂತೆ ಕೆಲಸ ಮಾಡಲಾಗುತ್ತಿಲ್ಲ. ಮುಖ್ಯವಾಗಿ ಕಾಯಂ ಆಯುಕ್ತರಿಲ್ಲ. ಕೆಎಂಎ ಆಗಿರುವ ಅಧಿಕಾರಿಯನ್ನು ನೇಮಿಸುವ ಬದಲು ಸರ್ಕಾರಿ ವೈದ್ಯರಾಗಿರುವ ಡಾ.ಪುಟ್ಟಸ್ವಾಮಿ ಎಂಬುವವರನ್ನು ನಿಯೋಜನೆ ಮಾಡಲಾಗಿದ್ದು, ಪ್ರಾಧಿಕಾರದ ಬಗ್ಗೆ ಅರಿವು ಇಲ್ಲದಿರುವುದರಿಂದ ಒಳ್ಳೆಯ ಆಡಳಿತ ನಿರೀೆ ಹುಸಿಯಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಅಧಿಕಾರ ಶಾಶ್ವತವಲ್ಲ, ಬದ್ಧತೆಯಿಂದ ಕೆಲಸ ಮಾಡಿ, ಜನರ ಪ್ರೀತಿ, ನಂಬಿಕೆ ಗಳಿಸುವೆ. ಟಮಕ ಬಡಾವಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆ. ಮೇ 27ರಂದು ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಸಭೆಯಲ್ಲೇ ಈ ಕಾರ್ಯಕ್ಕೆ ಒತ್ತು ನೀಡಲಿದ್ದೇನೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ವರ್ತುಲ ರಸ್ತೆ, ಇತರ ಅಭಿವೃದ್ಧಿ ಕೆಲಸಕ್ಕೂ ಸರ್ಕಾರಿಂದ ಅಗತ್ಯ ಸಹಕಾರ ಪಡೆದುಕೊಳ್ಳುವೆ. ಮಾದರಿ ಬಡಾವಣೆ ಮಾಡಬೇಕೆಂಬುದು ನನ್ನ ಕನಸು. ಎಸ್ಪಿ ಕಚೇರಿ ಸಮೀಪದಲ್ಲಿ ಉದ್ಯಾನಕ್ಕೆ ಮೀಸಲಾಗಿರುವ ಜಾಗದಲ್ಲಿ ಭವ್ಯ ಉದ್ಯಾನ ನಿರ್ಮಿಸಿ ಅದಕ್ಕೆ ಡಾ.ಪುನೀತ್​ ರಾಜಕುಮಾರ್​ ಹೆಸರು ಇಡಬೇಕೆಂಬುದು ನನ್ನ ಗುರಿ. ರಸ್ತೆಗಳಿಗೆ ರಾಷ್ಟ್ರ ಭಕ್ತರ ಹೆಸರು ಇಡಬೇಕೆಂಬುವ ವಿಚಾರದ ಬಗ್ಗೆಯೂ ಎಲ್ಲರ ಸಹಮತ ಪಡೆದುಕೊಳ್ಳುವೆ. ವಿಜಯಕುಮಾರ್​, ಅಧ್ಯಕ್ಷರು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ, ಕೋಲಾರ