ಬಳ್ಳಾರಿ : ಝೀಕಾ ಎಂಬುದು ವೈರಸ್ ಈಡೀಸ್ ಜಾತಿಯ ಸೊಳ್ಳೆಗಳಿಂದಲೂ ಹರಡುತ್ತದೆ. ಹಾಗಾಗಿ ಮನೆಯ ಸುತ್ತಲೂ ನೀರು ನಿಲ್ಲುವ ತ್ಯಾಜ್ಯ ಪರಿಕರಗಳನ್ನು ಸ್ವಚ್ಛವಾಗಿ ಇಡಬೇಕು ಎಂದು ಡಿಎಚ್‌ಒ ಡಾ.ವೈ. ರಮೇಶಬಾಬು ತಿಳಿಸಿದರು.
ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗ ಸಹಯೋಗದೊಂದಿಗೆ ವಿಶ್ವ ಸೊಳ್ಳೆ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದರು. ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ, ಕಲ್ಲಿನದೋಣಿ ಮುಂತಾದವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳವನ್ನು ಮುಚ್ಚುವ ಮೂಲಕ ರೋಗ ತಡೆಗೆ ಸಹಕರಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಮಾತನಾಡಿ, ಜಿಲ್ಲೆಯ ನಾಗರಿಕರು ಝೀಕಾ ವೈರಸ್ ಪ್ರಕರಣ ವರದಿಯಾದ ಪ್ರದೇಶಕ್ಕೆ ಪ್ರವಾಸ ಹೋಗಿಬಂದಲ್ಲಿ ಅಥವಾ ಆ ಪ್ರದೇಶದಿಂದ ತಮ್ಮ ಮನೆಗಳಿಗೆ ಬಂಧು-ಬಳಗ ಬಂದಲ್ಲಿ ಅವರಲ್ಲಿ ಯಾರಿಗಾದರೂ ಝೀಕಾ ವೈರಸ್ ಲಕ್ಷಣಗಳಾದ ಜ್ವರ, ಕಣ್ಣು ಕೆಂಪಾಗುವಿಕೆ, ತಲೆನೋವು, ಗಂಧೆಗಳು, ಕೀಲುಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಹೇಳಿದರು.