ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಮದ್ದೂರಿನ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ

ಮದ್ದೂರು: ಜಿಲ್ಲೆ ಹಾಗೂ ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಶುಕ್ರವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಜಿಲ್ಲೆ ಮತ್ತು ತಾಲೂಕಿನಲ್ಲಿ ಈಗಾಗಲೇ ಮುಂಗಾರು ಕೃಷಿ ಹಂಗಾಮು ಪ್ರಾರಂಭವಾಗಿದ್ದು, ಕೃಷಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಬೇಕು. ಕೃಷಿ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರಿಗೆ ಪಡಿತರ ಕಾರ್ಡ್ ವಿತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ ಗ್ಯಾರಂಟಿಗೆ ಅರ್ಜಿ ಹಾಕಲು ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಯಾರಿಂದಲೂ ಯಾವುದೇ ಹಣ ತೆಗೆದುಕೊಳ್ಳದಂತೆ ಸಂಬಂಧಪಟ್ಟವರಿಗೆ ಅಧಿಕಾರಿಗಳು ತಾಕೀತು ಮಾಡಬೇಕು ಎಂದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಅಪಘಾತಗಳುಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜತೆಗೆ ತಾಲೂಕಿನಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ಹೆಚ್ಚಿಸಬೇಕು ಹಾಗೂ ಸಾಮಾಜಿಕ ಭದ್ರತಾ ಯೋಜನೆ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ವಜಾ ಮಾಡಿಕೊಳ್ಳದಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಶಶಿಕಲಾ ಉಮಾಶಂಕರ್, ವೇದಿಕೆ ಪದಾದಿಕಾರಿಗಳಾದ ಯರಗನಹಳ್ಳಿ ಮಹಾಲಿಂಗು, ಸೋಂಪುರ ಉಮೇಶ್, ಸಾಗರ್, ಎಂ.ವೀರಪ್ಪ, ಜಗದೀಶ್, ಯಾಕೂಬ್, ಮನುಕುಮಾರ್, ನಾಗರಾಜು, ಶೇಖರಪ್ಪ, ಹರೀಶ್, ರಮೇಶ್, ಸುಧಾ, ಕಮಲ, ಉಮಾ ಇದ್ದರು.