ಜಿಲ್ಲೆ

ಜ್ಯೋತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ

ಕಲಬುರಗಿ: ಕರ್ನಾಟಕ ನಾಮಕರಣದ ೫೦ನೇ ವರ್ಷಾಚರಣೆ ನಿಮಿತ್ತ ರಾಜ್ಯದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಯ ಜಾಗೃತಿ ಮೂಡಿಸುವ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆಗೆ ನಗರದಲ್ಲಿ ಶನಿವಾರ ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಜಿಲ್ಲಾಡಳಿ, ಕನ್ನಡ ಸಾಹಿತ್ಯ ಪರಿಷತ್ ಸೇರಿ ವಿವಿಧ ಸಂಘ, ಸಂಸ್ಥೆಗಳಿಂದ ಕುಂಭ ಕಳಶ, ವಾದ್ಯ ಮೇಳದೊಂದಿಗೆ ಸ್ವಾಗತಿಸಲಾಯಿತು. ಶಾಸಕ ಅಲ್ಲಮಪ್ರಭು ಪಾಟೀಲ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರಥದಲ್ಲಿರುವ ನಾಡ ದೇವತೆ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿ, ಚಾಲನೆ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ೧೯೭೩ರಲ್ಲಿ ಡಿ.ದೇವರಾಜ ಅರಸು ಮೈಸೂರನ್ನು ಕರ್ನಾಟಕ ಎಂದು ನಾಮಕರಣದ ೫೦ನೇ ವರ್ಷಾಚರಣೆಗಾಗಿ ರಾಜ್ಯ ಸರ್ಕಾರ ಇಡೀ ವರ್ಷ ನಾಡು-ನುಡಿ ಯುವ ಪೀಳಿಗೆಗೆ ಪರಿಚಯಿಸಲು ರಥ ಯಾತ್ರೆ ಹಮ್ಮಿಕೊಂಡಿದೆ. ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಜ್ಯೋತಿ ರಥಯಾತ್ರೆ ನಗರದ ಅನ್ನಪೂರ್ಣ ವೃತ್ತ, ಸರ್ಕಾರಿ ಆಸ್ಪತ್ರೆ, ಖರ್ಗೆ ಪೆಟ್ರೋಲ್ ಬಂಕï, ಹಾಗರಗಾ ವೃತ್ತ, ಹುಮನಾಬಾದ್ ವೃತ್ತ, ಪೂಜಾರಿ ಚೌಕ್, ಕಾಕಡೆ ಚೌಕ್, ತಾಜ್ ಸುಲ್ತಾನಪುರ ರಿಂಗ್ ರೋಡ್, ಆಳಂದ ಚೆಕ್ ಪೋಸ್ಟ್, ಮಿರ್ಚಿ ಗೋದಾಮ, ಹೀರಾಪುರ ರಿಂಗ್ ವೃತ್ತ, ಕೇಂದ್ರ ಬಸ್ ನಿಲ್ದಾಣ ಮೂಲಕ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಸಂಪನ್ನಗೊಂಡಿತು. ಭಾನುವಾರ ಕಾಳಗಿಗೆ ಪ್ರಯಾಣ ಬೆಳೆಸಲಿದೆ.

ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಶಿಷ್ಠಾಚಾರ ತಹಸೀಲ್ದಾರ್ ನಿಸಾರ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ ಸೇರಿ ಕನ್ನಡಪರ ಸಂಘಟನೆ ಪದಾಧಿಕಾರಿಗಳು, ಸಾಹಿತಿಗಳು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.