ಬಸವಕಲ್ಯಾಣ: ಅಜ್ಞಾನದ ಕತ್ತೆಲೆಯಿಂದ ಪಾರು ಮಾಡಿ ಸುಜ್ಞಾನದ ಬೆಳಕು ತೋರುವ ಶಕ್ತಿ ಜ್ಞಾನಿಗಳಿಗೆ, ಮಹಾತ್ಮರಿಗೆ ಹಾಗೂ ತಪಸ್ವಿಗಳಿಗೆ ಇರುತ್ತದೆ ಎಂದು ಹಾವೇರಿ ಜಿಲ್ಲೆಯ ನರಸೀಪುರದ ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ನುಡಿದರು.
ಸಸ್ತಾಪುರದ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಆನಂದಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಪೂಜ್ಯ ಲಿಂ.ಸದ್ಗುರು ಯಲ್ಲಾಲಿಂಗೇಶ್ವರರ ೩೯ನೇ ಪುಣ್ಯಸ್ಮರಣೋತ್ಸವ ಹಾಗೂ ಪೂಜ್ಯ ಮಹಾದೇವಿತಾಯಿ ಅವರ ೬೦ನೇ ಷಷ್ಠ್ಯಬ್ದಿ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಬಾಲ ತಪಸ್ಸಿಯಾಗಿರುವ ಮಹಾದೇವಿ ತಾಯಿ ಅವರ ಸಮಾಜಮುಖಿ ಕಾರ್ಯ ಶ್ಲಾಘನಾರ್ಹ, ಇಲ್ಲಿಯ ಮಠದಿಂದ ಅನ್ನ ದಾಸೋಹ, ಜ್ಞಾನ ದಾಸೋಹ ನಿರಂತರವಾಗಿ ನಡೆಯಲಿ, ಜನ ಕಲ್ಯಾಣ ಕಾರ್ಯಗಳು ಮತ್ತಷ್ಟು ನಡೆಯಲಿ ಎಂದು ಶುಭ ಹಾರೈಸಿದರು.
ಬಸವಕಲ್ಯಾಣ ಕ್ಷೇತ್ರದ ಹಾಗೂ ಸಮಾಜದ ಪ್ರಗತಿಯ ಬಗ್ಗೆ ದಿವಂಗತ ಬಿ.ನಾರಾಯಣರಾವ ಕಾಳಜಿ ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಅನುಭವ ಮಂಟಪ ನಿರ್ಮಾಣವಾಗಬೇಕು ಎಂದು ಅಂದು ವಿಧಾನ ಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ತ್ರಿಪುರಾಂತ ಕೆರೆಯಲ್ಲಿ ಬಸವಣ್ಣನವರ ಹಾಗೂ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪನೆ ಅವರ ಕನಸಾಗಿತ್ತು ಎಂದರು.
ಕರ್ನಾಟಕ ಮೀನುಗಾರಿಗೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಮಾತನಾಡಿ, ಮಹಿಳೆಯರ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದ್ದು, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಣ್ಣು ಮಕ್ಕಳು ಶ್ರಮ ಉನ್ನತ ಶಿಕ್ಷಣ ಪಡೆಯುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕು. ಇದಕ್ಕೆ ಸಮಾಜ ಸಹಕರಿಸಬೇಕು ಎಂದರು.
ಸಮಾವೇಶದ ಸರ್ವಾಧ್ಯಕ್ಷೆ, ಚಿಂತಕಿ ಡಾ.ಜಯದೇವಿ ಗಾಯಕವಾಡ ಮಾತನಾಡಿ, ಪ್ರಗತಿಗೆ ಶಿಕ್ಷಣವೇ ಮೂಲ ಮಂತ್ರವಾಗಿದ್ದು, ಮಹಿಳೆಯರು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದ ಜತೆಗೆ ಆತ್ಮಸ್ಥೈರ್ಯ, ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಸ್ತಾಪುರನ ಶ್ರೀ ಸದಾನಂದ ಅಪ್ಪಗಳು, ಶ್ರೀ ರತ್ನಕಾಂತ ಶಿವಯೋಗಿಗಳು ಸಾನ್ನಿಧ್ಯ, ಪೂಜ್ಯ ಮಹಾದೇವಿತಾಯಿ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಶಿವಕುಮಾರ ಪಾಟೀಲ, ಪ್ರಕಾಶ ಪಾಟೀಲ, ಪ್ರತೀಕ ಮುಳೆ, ಭೀಮಾಶಂಕರ ಮುಳೆ ಹಾದೇವರೆಡ್ಡಿ, ನಾಗಪ್ಪ ಜಮಾದಾರ, ಡಾ.ಸಿದ್ರಾಮ ವಾಘಮಾರೆ ಇತರರಿದ್ದರು.
ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಗೌಡಪ್ಪ ಪಾಟೀಲ ವಂದಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಪ್ರಶಸ್ತಿ ಪುರಸ್ಕೃತರು: ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ.ಶಾಂತಪ್ಪ ಡಂಬಳ, ಬಸವರಾಜ ಐನೋಳಿ, ಡಾ.ರಾಜಕುಮಾರ ಮಾಳಗೆ, ಡಾ.ಚಿದಾನಂದ ಕುಡ್ಡನ್ನ, ಡಾ.ಅವಿನಾಶ ದೇವನೂರ, ಮಹಾದೇವ್ಪ ಶಿವಶಣರ, ಅಶೋಕ ಕಟ್ಟಿ, ಡಾ.ಸುಖದೇವಿ ಗಂಟೆ, ಡಾ.ಹನಮಂತಪ್ಪ ನಡವಿನಕೇರಿ, ಮುತ್ತು ಮನಳ್ಳಿ, ಅಜಯಕುಮಾರ ಡಿ., ದೀಪಕ ಕಮತರ, ಗುರಣ್ಣ ಯಮನೂರ, ಭರಮಪ್ಪ ಈರಪ್ಪ ಹಿರೇಹೊಳಿ ಸಾಹಿತ್ಯ ಸಿರಿ ಪ್ರಶಸ್ತಿ ಹಾಗೂ ಶ್ರೀ ಯಲ್ಲಾಲಿಂಗೇಶ್ವರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಡಾ.ಜಯದೇವಿ ಗಟ್ಡಿ ಬರಹಗಾರ್ತಿ: ಡಾ.ಜಯದೇವಿ ಗಾಯಕವಾಡ ಅವರು ಹೊಸ ಕಾವ್ಯ ಪ್ರಕಾರದಲ್ಲಿ ಕೃಷಿಗೈದು ಸಾಹಿತ್ಯದ ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿ ಸಾಹಿತ್ಯದ ಸಾಮಾಜಿಕ ಸಂವೇದನೆಯ ಗಟ್ಡಿ ಬರಹಗಾರ್ತಿಯಾದವರು. ಅವರ ಸಾಹಿತ್ಯದ ಸೇವೆ ಅನನ್ಯ ಎಂದು ಲೇಖಕಿ ಡಾ.ಶೀಲಾದೇವಿ ಬಿರಾದಾರ ಹೇಳಿದರು. ಎರಡು ದಿನಗಳ ಪ್ರಥಮ ಮಹಿಳಾ ಸಮಾವೇಶದಲ್ಲಿ ಸೋಮವಾರ ನಡೆದ ಧರ್ಮ ಮಹಿಳಾ ಗೋಷ್ಠಿಯಲ್ಲಿ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ ಅವರ ಬದುಕು-ಬರಹ ಕುರಿತು ಮಾತನಾಡಿದರು. ಭಾಲ್ಕಿಯ ಸಾಹಿತಿ ಡಾ.ಮಕ್ತುಂಬಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಆರೋಗ್ಯ ಇಲಾಖೆಯ ಎನ್‌ಒಎಚ್‌ಪಿ ಜಿಲ್ಲಾ ನೋಡರ್ ಅಧಿಕಾರಿ ಡಾ.ಸಂಧ್ಯಾ ಕಾನೇಕರ ಮಾತನಾಡಿದರು. ಕ್ಷೇತ್ರ ಶಿಕ್ಷಣಾದಿಕಾರಿ ಸಿದ್ಧವೀರಯ್ಯ ರುದ್ನೂರು ಗೋಷ್ಠಿ ಉದ್ಘಾಟಿಸಿದರು. ಅಕ್ಷರ ದಾಸೋಹ ಅಧಿಕಾರಿ ಸಂಜಯಕುಮಾರ ಕಾಂಗೆ, ಅಲ್ಲಾವುದ್ದೀನ್ ಪಟೇಲ್, ರಾಜಮತಿ ಕೊಳಾರೆ, ಶಿವರಾಜ ಡಿ.ಮೇತ್ರೆ, ಸಾಹಿತಿ ಸಂಗಮೇಶ ಜವಾದಿ ಇದ್ದರು. ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು, ಹಣಮಂತ ಶ್ರೀಗೇರಿ ವಂದಿಸಿದರು. ಡಾ.ಸಿದ್ದಪ್ಪ ಹೊಸಮನಿ ನಿರೂಪಣೆ ಮಾಡಿದರು. ಕಲಬುರಗಿಯ ಸಾಹಿತಿ ಡಾ.ಕೆ.ಎಸ್.ಬಂಧು ಅಧ್ಯಕ್ಷತೆಯಲ್ಲಿ ನಡೆದ ಗವಿಗೋಷ್ಠಿಯಲ್ಲಿ ಕವಿಗಳಾದ ಡಾ.ಅವಿನಾಶ ದೇವನೂರ, ಡಾ.ಸುಖದೇವಿ ಘಂಟೆ, ಲೀಲಾ ಸಂಗ್ರಮ ಕವನ ವಾಚಿಸಿದರು. ಜೈಭೀಮ ಹೋಳಿಕೇರಿ ಸ್ವಾಗತಿಸಿದರು. ಡಾ.ಮಲ್ಲಿನಾಥ ನಿಂಬರ್ಗೆ ವಂದಿಸಿದರು. ಆಕಾಶ ತೆಗನೂರ ನಿರೂಪಣೆ ಮಾಡಿದರು.