ಜಿಲ್ಲೆ

ಜ್ಞಾನರ್ಜನೆಗೆ ಸೃಜನಶೀಲ ಚಟುವಟಿಕೆ ಅಗತ್ಯ

ಚಿತ್ರದುರ್ಗ: ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉತ್ತಮ ಜ್ಞಾನವನ್ನು ಪಡೆಯಬಹುದು ಎಂದು ಭರಮಸಾಗರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿ ವಿನೋದಮ್ಮ ಹೇಳಿದರು.

ತಾಲೂಕಿನ ಬಚ್ಚಬೋರನಹಟ್ಟಿ ಹೋ.ಚಿ.ಬೋರಯ್ಯ ಪ್ರೌಢಶಾಲೆಯಲ್ಲಿ ಈಚೆಗೆ ರಾಜ್ಯ ಬಾಲಭವನ ಸೊಸೈಟಿ, ಜಿಪಂ, ಜಿಲ್ಲಾ ಬಾಲ ಭವನ ಸಮಿತಿ, ಭರಮಸಾಗರ ಶಿಶು ಅಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಕ್ರಿಯಾತ್ಮಕ, ಸೃಜನಾತ್ಮಕ ಚಟುವಟಿಕೆಗಳ ಸ್ಪರ್ಧಾ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಭವನದ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದರು.

ಜಿಲ್ಲಾ ಬಾಲಭವನ ಸಮಿತಿ ಕಾರ‌್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ಮಾತನಾಡಿ, ಏಕಾಗ್ರತೆಯಿಂದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗುವ ಸ್ಪರ್ಧಾ ಜಗತ್ತಿನಲ್ಲಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬಾಲ್ಯ ವಿವಾಹ ಮೊದಲಾದ ಮೌಢ್ಯಗಳಿಂದ ಹೊರ ಬರುವಂತೆ ಪಾಲಕರಿಗೆ ಸಲಹೆ ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ತಿಪ್ಪೇಸ್ವಾಮಿ, ಶಿಕ್ಷಕ ಬೋರಯ್ಯ, ಅಂಗನವಾಡಿ ಕಾರ‌್ಯಕರ್ತೆಯರಾದ ಗೌರಮ್ಮ, ರತ್ನಮ್ಮ, ಸಿರಿ ಸಂಪಿಗೆ ಸಂಸ್ಥೆಯ ಪವಿತ್ರಾ ಇತರರಿದ್ದರು.