ರಿಪ್ಪನ್‌ಪೇಟೆ: ಆಧ್ಯಾತ್ಮಿಕ ಪ್ರಭಾವನೆ ಅರಿವು ಮೂಡಿಸಿದಲ್ಲಿ ಸಮಾಜದಲ್ಲಿ ಸಮಾನತೆ, ಸೌಹಾರ್ದ ಭಾವ ಪ್ರತಿಯೊಬ್ಬರಲ್ಲಿ ಕಾಣಬಹುದು ಎಂದು ಹೊಂಬುಜ ಜೈನಮಠದ ಶ್ರೀ ದೇವೆಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನಮಠದಲ್ಲಿ ದಶಮಿಯಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಕಾಲಕಾಲಕ್ಕೆ ಜೈನ ಮುನಿಶ್ರೀಗಳು ಜೈನ ಧರ್ಮದ ಆಚರಣೆ, ವಿಚಾರಗಳನ್ನು ಪ್ರಸರಿಸಿ, ಸನ್ನಡತೆ ಸಮಾಜ ನಿರ್ಮಾಣಕ್ಕಾಗಿ ಪೂರಕ ಧರ್ಮ ತತ್ವಗಳನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.
ಬದುಕು ಬಂಗಾರವಾಗಲಿ, ಇಷ್ಟಾರ್ಥ ಪ್ರಾಪ್ತಿಗಾಗಿ ಧರ್ಮ, ಪರಂಪರೆ ಶ್ರೀರಕ್ಷೆ ಆಗಿದೆ ಎಂಬ ಸದ್ವಿಚಾರವನ್ನು ಅರಿತಾಗ ಯಶಸ್ಸು ನಿಶ್ಚಿತ ಎಂದರು. ಪುರೋಹಿತರಾದ ಪದ್ಮರಾಜ ಇಂದ್ರ, ಸಹ ಪುರೋಹಿತರು ಸಿಂಹಾಸನ ಪೂಜೆ, ಬಿರುದಾವಳಿ ವಾಚನ, ಪಾದಪೂಜೆ ನೆರವೇರಿಸಿದರು.