ಜಿಲ್ಲೆ

ಜ್ಞಾನದ ಸಂಪತ್ತು ವಿಸ್ತಾರವಾಗಲಿ: ಪ್ರೊ.ನಟರಾಜ ಹುಳಿಯಾರ್

ಮಂಜುನಾಥ ತಿಮ್ಮಯ್ಯ

ಮೈಸೂರು: ಮಾನವನಿಗೆ ಜ್ಞಾನ ವಿಕಾಸವಾಗುತ್ತ ಹೋದಂತೆ ಮುಂದೇನು ಎನ್ನುವುದು ಪ್ರತಿಯೊಬ್ಬರಲ್ಲೂ ಕಾಡುತ್ತದೆ ಎಂದು ಸಾಹಿತಿ ಪ್ರೊ.ನಟರಾಜ ಹುಳಿಯಾರ್ ಹೇಳಿದರು.

ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ಆಧುನಿಕೋತ್ತರ ಅಧ್ಯಯನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಬದಲಾದಂತೆ ನಮ್ಮ ಜತೆಗಿರುವವರು ಬದಲಾಗುತ್ತಾರೆ. ಬದಲಾವಣೆ ಜಗದ ನಿಯಮ ಎನ್ನುವಂತಾಗಿದೆ. ಹಿಂದಿನ ಕಾಲದ ವಚನಗಳು ಮತ್ತು ಎಂ.ಎಂ.ಕಲಬುರಗಿ ಅವರ ವಚನ ಸಂಗ್ರಹಗಳನ್ನು ಇಟ್ಟುಕೊಂಡು ನಾವು ಮುಂದೇ ಸಾಗಲು ಸಾಧ್ಯವೇ? ಮುಂದಕ್ಕೆ ಹೋಗದಿದ್ದರೆ ಅದು ಸ್ಥಾವರವಾಗುತ್ತದೆ ಎಂದು ತಿಳಿಸಿದರು.

ಈ ದೇಶದ ಮೊದಲ ವಿಶ್ವವಿದ್ಯಾಲಯವಾದ ನಳಂದ ವಿಶ್ವವಿದ್ಯಾಲಯ ಯಾರಿಂದ ಧ್ವಂಸವಾಯಿತು ಎಂದರೆ ಭಕ್ತಿಯಾರ್ ಖಿಲ್ಜಿ ಎನ್ನುತ್ತೇವೆ. ಅದರೆ ನಿಜವಾದ ವಾಸ್ತವವೇ ಬೇರೆ? ಪ್ರಖ್ಯಾತ ಇತಿಹಾಸಕಾರ ರೋಮಿಲಾ ಥಾಪರ್ ಅವರಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಟಿಪ್ಪುವನ್ನು ಬ್ರಿಟಿಷರು ಹೇಗೆ ಸೋಲಿಸಿದರು ಎಂಬುದು ಗೊತ್ತಿದೆ. ಹೊರಗಿನ ವ್ಯಕ್ತಿಗಳಿಂದ ನಾಶವಾಗಿಲ್ಲ. ನಮ್ಮವರಿಂದಲೇ ಆಗಿರಬಹುದು ಎಂದರು.

ಜ್ಞಾನದ ಫಲವನ್ನು ಕೇವಲ ಒಬ್ಬರೆ ಅನುಭೋಗಿಸಬಾರದು. ಜ್ಞಾನದ ಸಂಪತ್ತು ವಿಸ್ತಾರವಾಗಬೇಕು. ಆಗ ಮಾತ್ರ ಗುರು, ಶಿಷ್ಯರ ಸಂಬಂಧ ಚೆನ್ನಾಗಿ ಬೆಳೆಯುತ್ತದೆ. ಇತ್ತೀಚೆಗೆ ಗುರು, ಶಿಷ್ಯರ ಸಂಬಂಧ ಬದಲಾಗುತ್ತಿದೆ. ಪ್ರಸ್ತುತ ಕಾಲದಲ್ಲಿ ಅಲ್ಲಮ ಪ್ರಭು ಅವರ ವಚನದ ಸಾಲಿನ ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದ ಚಿಂತನೆಯನ್ನು ನೋಡಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾಲದ ಕಟ್ಟಳೆಯ ಕಲಿತನಕ್ಕೆ ಕಲಿಯುವುದು ಎಲ್ಲರಿಗೂ ಸಿಕ್ಕಿದೆ. ಕನ್ನಡ ಸಾಹಿತ್ಯ ಕಲಿತನ ಬದಲಾಗಬೇಕು. ಅಲ್ಲದೆ ಎಲ್ಲ ಕನ್ನಡದ ಪಠ್ಯಗಳು ಜಾಲತಾಣದಲ್ಲಿ ಸಿಗುವಂತಿರಬೇಕು. ಆಧುನಿಕೋತ್ತರ ಚಿಂತನೆ ಎಲ್ಲವನ್ನೂ ಒಳಗೊಳ್ಳುವಂತಿರಬೇಕು ಎಂದು ತಿಳಿಸಿದರು.

ಎಲ್ಲ ಧರ್ಮಗಳ ಚಿಂತನೆಯನ್ನು ಪರೀಕ್ಷಿಸಿ ನೋಡಬೇಕು. ಸಾಹಿತ್ಯ, ಸಂಸ್ಕೃತಿ ವಿಮರ್ಶೆಗೆ ದೊಡ್ಡ ಕಥೆಗಳನ್ನು ಪ್ರಶ್ನಿಸುವುದರಿಂದ ಸಣ್ಣ ಕಥೆಗಳು ಉಗಮವಾಗುತ್ತವೆ. ನಮ್ಮಲ್ಲಿ ಜಾಗತೀಕರಣವನ್ನು ಬಿಲ್ ಕ್ಲಿಂಟನ್ ಒಪ್ಪಿಕೊಂಡರೂ ಟ್ರಂಪ್ ಒಪ್ಪುತ್ತಿಲ್ಲ. ಇದು ವಿಪರ್ಯಾಸ, ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಜುಗರಿ ಕ್ರಾಸ್‌ನಲ್ಲಿ ಜಾಗತೀಕರಣ ಬಗ್ಗೆ ಮಹತ್ವದ ವಿಚಾರವನ್ನು ತಿಳಿಸಿದ್ದಾರೆ ಎಂದರು.

ಆಧುನಿಕತೆಯ ಯುಗದಲ್ಲಿ ಸಾಹಿತ್ಯದಲ್ಲಿ ಗದ್ಯವು ಪದ್ಯಕ್ಕೆ ಪದ್ಯವು ಹಾಡಿಗೆ ಬದಲಾಗುತ್ತ ರಚನೆ ಸಾಗಿದೆ. ಯಾವುದು ರಚನ ರೂಪದಲ್ಲಿ ಇರುತ್ತದೆಯೋ ಅದರಿಂದ ಅರ್ಥ ಸಿಗುತ್ತದೆ. ಸಾಹಿತ್ಯ ರಚನೆ ಬದಲಾವಣೆಯನ್ನು ಬಯಸುತ್ತದೆ ಎಂದು ವಿವರಿಸಿದರು.

ಮೈವಿವಿ ಪ್ರಸಾರಂಗದ ನಿರ್ದೇಶಕ, ಶಿಬಿರದ ಸಂಯೋಜಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕರಾದ ಪ್ರೊ.ಎಚ್.ಸಿ.ಜ್ಯೋತಿ, ಡಾ.ಎಲ್.ನಂಜುಂಡ ಸ್ವಾಮಿ ಇತರರು ಇದ್ದರು.