ಜಿಲ್ಲೆ

ಜ್ಞಾನದ ಸಂಕೇತವಾಗಿ ಗುರು ಪರಿಗಣನೆ

ವಿರಾಜಪೇಟೆ: ಕತ್ತಲಿನಿಂದ ಬೆಳಕಿಗೆ ಎಂಬುದರ ಅರ್ಥ ಕಲ್ಪಿಸುವ ಶಕ್ತಿ ಇರುವುದು ಗುರುವಿಗೆ ಮಾತ್ರ ಎಂದು ದಕ್ಷಿಣ ಪ್ರಾಂತ ಸಂಘ ಪ್ರಚಾರಕ್ ಪ್ರವೀಣ್ ಸರಳಾಯ ಬಣ್ಣಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರಾಜಪೇಟೆ ಶಾಖೆ ವತಿಯಿಂದ ನಗರದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಗುರು ಪೂರ್ಣಿಮೆ ಉತ್ಸವ ಕಾರ್ಯಕ್ರಮದ ಬೌದ್ಧಿಕ್ ನೀಡಲು ಆಗಮಿಸಿ ಮಾತನಾಡಿದ ಅವರು, ಗುರುಕುಲ ಶಿಕ್ಷಣವನ್ನು ಬ್ರಿಟಿಷರ ಆಡಳಿತ ಅಧಿಕಾರಿಗಳು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಕತ್ತಲು ಎಂದರೆ ಅಜ್ಞಾನ, ಬೆಳಕು ಎಂದರೆ ಜ್ಞಾನ ಎಂಬಂತೆ ಗುರುವನ್ನು ಜ್ಞಾನದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಭಗವತ್ ಧ್ವಜವನ್ನು ಗುರು ಎಂದು ಪರಿಗಣಿಸಿದೆ. ಸಂಘವು 40 ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಧ್ಯೇಯವೇ ಜಗದ ಉದ್ಧಾರ. ಸಂಘವು 100 ವರ್ಷಗಳ ಹೊಸ್ತಿಲಲ್ಲಿದೆ. ಸಂಘವು ಮಾಡುವ ಕಾರ್ಯಕ್ರಮಗಳ ಬಗ್ಗೆ ಅಪಪ್ರಚಾರ, ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ದೇಶ ಧರ್ಮದ ಒಳಿತಿಗಾಗಿ ತ್ಯಾಗ ಮನೋಭಾವದಿಂದ ಸೇವಾರ್ಥರಾಗೋಣ ಎಂದರು.

ಪೌರಾಣಿಕ ಕಥೆಗಳಲ್ಲಿ ಉಲ್ಲೇಖಿಸಿದಂತೆ ನಮ್ಮ ಋಷಿ ಮುನಿಗಳು ಜಗದ ಒಳಿತಿಗಾಗಿ ಯಜ್ಞಗಳನ್ನು ಮಾಡುತಿದ್ದರು. ಯಜ್ಞದಿಂದ ಜಗತ್ತಿನ ಉದ್ಧಾರವಾಗುತ್ತಿತ್ತು. ಯಜ್ಞಗಳು ಸಮಾಜಕ್ಕೆ ಹಿತ ಬಯಸುವುದಾಗಿದೆ. ಜಗತ್ತಿನ ಎಲ್ಲ ಜೀವಿಗಳಿಗೆ ಸಂಬಂಧಗಳಿವೆ. ಆದರೆ ಪ್ರಸ್ತುತ ಸಮಾಜದಲ್ಲಿ ಸಂಬಂಧಗಳಿಗೆ ಮೌಲ್ಯಗಳಿಗೆ ಅರ್ಥವಿಲ್ಲದಂತಾಗಿದೆ. ಸಂಬಂಧಗಳು ಮುರಿಯದಂತೆ ಕಾಪಾಡುವ ಮನಸ್ಸು ನಮ್ಮದಾಗಬೇಕು. ಸಂಘದ 100 ವರ್ಷ ತುಂಬಿರುವ ಸುಸಂದರ್ಭದಲ್ಲಿ ಪಂಚ ಪರಿವರ್ತನೆಗೆ ಮುಂದಾಗಿದೆ. ಕುಟುಂಬ ಪ್ರಭೋದನ್, ಜಾತಿಯತೆ ( ಸಾಮಾಜಿಕ ಪರಿವರ್ತನೆ) ಪರಿಸರ ಸಂರಕ್ಷಣೆ, ಸತ್ವ ಮತ್ತು ನಾಗರಿಕ ಶಿಷ್ಟಾಚಾರ ಎಂಬ ಐದು ಅಂಶಗಳಿಗೆ ಮಹತ್ವ ನೀಡಿ ಸಂಘದ ಪ್ರತಿಯೊಬ್ಬ ಕಾರ್ಯಕರ್ತರು ಪರಿಪಾಲನೆಗೆ ಮುಂದಾಗುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಮಾತಂಡ ಅಯ್ಯಪ್ಪ, ರಾಜ್ಯದಲ್ಲಿ ಸಂಘ ಕಾರ್ಯಚಟುವಟಿಕೆ ಬಗ್ಗೆ ಟೀಕೆ ಮಾಡುತ್ತಿರುವ ಬುದ್ಧಿಜೀವಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡುತ್ತೇವೆ ಎಂದು ಹೇಳುತ್ತಾ ಕಾಲಹರಣ ಮಾಡುತಿದ್ದಾರೆ. ಇದು ಅವರಿಂದ ಸಾಧ್ಯವಿಲ್ಲ, ಸಂಘದ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಶಾಖೆಗಳಲ್ಲಿ ನಡೆಯವ ಸಂವಾದ, ಹಿರಿಯರ ಸಂದೇಶಗಳು ಉಪದೇಶಗಳಿಂದ ತಿಳಿದು ಅರಿಯಬೇಕು. ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಯನ್ನು ಸಂಘವು ಸಾಕ್ಷೀಕರಿಸುತ್ತದೆ. ಸಂಘ ಸೇವೆ ಮತ್ತು ತ್ಯಾಗದ ಸಂಕೇತವಾಗಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರಾಜಪೇಟೆ ಶಾಖೆಯ ಕಾರ್ಯಕರ್ತರಿಂದ ಭಗವಾ ಧ್ವಜಕ್ಕೆ ಅರ್ಚನೆ ಮತ್ತು ಅರ್ಪಣೆ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಲೂಕು ಸಂಘ ಚಾಲಕ ಆಶ್ವಿನ್ ಮೇದಪ್ಪ ಉಪಸ್ಥಿತಿರಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರಾಜಪೇಟೆ ಶಾಖೆಯ ಹಿರಿಯ ಕಿರಿಯ ಕಾರ್ಯಕರ್ತರು, ನಗರದ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಹಿಂದುಗಳು ಹಾಜರಿದ್ದರು.