ಚನ್ನಮ್ಮನ ಕಿತ್ತೂರು: ಶಕುಂತಲಾ ಗಡಗಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ತಾಲೂಕಿನ ಬಡ ಮಕ್ಕಳಿಗೆ ಆಶಾಕಿರಣವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಕುಂತಲಾ ಗಡಗಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರ ಶಿಸ್ತಿಗೆ ಮೊದಲ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳು ಆಯ್ದುಕೊಂಡ ವಿಷಯ ಶ್ರದ್ಧೆ ಹಾಗೂ ಶ್ರಮ ವಹಿಸಿ ಕಲಿಯಿರಿ. ಇಂದು ತಾಲೂಕಿನ ಬಡ ಮಕ್ಕಳಿಗಾಗಿ ಡಾ.ವೀರಭದ್ರಪ್ಪ ಗಡಗಿ ಅವರು ನರ್ಸಿಂಗ್ ಕಲಿಯುವ ಅವಕಾಶ ಒದಗಿಸಿದ್ದಾರೆ. ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಡಾ.ವಿ.ಇ.ಗಡಗಿ ಮಾತನಾಡಿ, ನರ್ಸಿಂಗ್ ಎಂಬ ಭಾವನೆಯಲ್ಲಿ ಕಲಿಯದೆ ಉತ್ತಮವಾಗಿ ಅಧ್ಯಯನ ಮಾಡಿ ಜನಸೇವೆ ಮಾಡಬೇಕು. ಆಸ್ಪತ್ರೆ ಹಾಗೂ ಕಾಲೇಜು ಮಾಡಬೇಕೆಂಬ ಮಹಾದಾಸೆ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ ಎಂದರು.
ಹೊಸ ವಿದ್ಯಾರ್ಥಿಗಳು ದೀಪ ಬೆಳಗಿಸಿ, ಪ್ರಮಾಣ ವಚನ ಸ್ವೀಕರಿಸಿದರು.
ಪಪಂ ಅಧ್ಯಕ್ಷ ಜೈಸಿದ್ದರಾಮ ಮರಿಹಾಳ, ವಿ.ಟಿ. ಹನುಮಾರೆಡ್ಡಿ, ಜಿ.ಕೆ .ಭಾರತಿ, ಜೈರಾಜ ಕಾಜಗಾರ, ಡಾ.ಚಂದ್ರಕಾಂತ್ ಪೊಲೀಸ್‌ಪಾಟೀಲ ಇತರರಿದ್ದರು.