ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಮಾಜ ಸೇವಕ ಕೆ.ಎಂ.ಉದಯ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಹರೀಶ್, ಶೇಖರ್, ಶ್ರೀಕಂಠ, ವಿಜಯ ವಿಕ್ರಮ, ರಾಮಲಿಂಗ ಇದ್ದರು. 
ಜಿಲ್ಲೆ

ಜ್ಞಾನಕ್ಕಿಂತ ದೊಡ್ಡ ಆಸ್ತಿ ಯಾವುದೂ ಇಲ್ಲ

ಮದ್ದೂರು: ಪ್ರಪಂಚದಲ್ಲಿ ಜ್ಞಾನಕ್ಕಿಂತ ದೊಡ್ಡ ಆಸ್ತಿ ಯಾವುದೂ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಮನಗಂಡು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಉದಯ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ವಳಗೆರೆಹಳ್ಳಿ ಮತ್ತು ಗೆಜ್ಜಲಗೆರೆ ಗ್ರಾಮಗಳಲ್ಲಿ ಶನಿವಾರ ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಹಣ, ಆಸ್ತಿ, ಐಶ್ವರ್ಯವನ್ನು ಯಾರು ಬೇಕಾದರೂ ನಮ್ಮಿಂದ ಕದಿಯಬಹುದು. ಆದರೆ, ಕಷ್ಟಪಟ್ಟು ಕಲಿತ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಇದೆ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತವಾಗಿ ಸ್ಕೂಲ್ ಬ್ಯಾಗ್, ನೋಟ್ ಬುಕ್, ಪರಿಕರಗಳನ್ನು ನೀಡಲಾಗಿದೆ. ಹಲವು ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಟ್ಟಡ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಆರ್ಥಿಕ ಸಹಾಯ, ಉನ್ನತ ಶಿಕ್ಷಣ ಮಾಡಲು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣ ಸಹಾಯ ಮಾಡಲಾಗುತ್ತಿದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಟ್ರಸ್ಟ್ ವತಿಯಿಂದ ಕಟ್ಟುವ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.

ವಿದ್ಯಾರ್ಥಿಗಳು ಕಠಿಣ ಶ್ರಮಪಟ್ಟು ಓದುವ ಮೂಲಕ ಜೀವನದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿ ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗುವ ಮೂಲಕ ಪಾಲಕರಿಗೆ ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದರು.

ಪ್ರವೀಳ ವೀರಪ್ಪ ಪ್ರೌಢಶಾಲೆಯ ಆಡಳಿತಾಧಿಕಾರಿ ರವಿ, ಮುಖ್ಯಶಿಕ್ಷಕ ಎನ್.ಶಿವಣ್ಣ, ಟ್ರಸ್ಟಿ ಅನೂಜ್‌ಸತೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್, ಮುಖಂಡರಾದ ವಿಜಯ ವಿಕ್ರಮ ರಾಮಲಿಂಗ, ಶ್ರೀಕಂಠ, ಶೇಖರ್, ಅವಿನಂದನ್, ಹರೀಶ್, ಮರಿಲಿಂಗೇಗೌಡ, ಶಿವಣ್ಣ, ಪಾಪಣ್ಣ, ಆದಿಮೂರ್ತಿ ಇದ್ದರು.

ರಾಜಕೀಯಕ್ಕೆ ಬರಲು ಸದ್ಯದಲ್ಲೇ ತೀರ್ಮಾನ
ಕ್ಷೇತ್ರದಲ್ಲಿ ನಾನು ಮಾಡುತ್ತಿರುವ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಜನರು ರಾಜಕೀಯಕ್ಕೆ ಬರುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನು ರಾಜಕೀಯ ಬರುವ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ತಾಲೂಕಿನ ವಳಗೆರೆಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ ಹಾಗೂ ರಾಜಕೀಯಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಆದರೆ, ರಾಜಕೀಯಕ್ಕೆ ಬರುವ ಸಂಬಂಧ ಸದ್ಯದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಉತ್ತಮ ಆಡಳಿತ ನೀಡಿದವರು ಮತ್ತು ನಮ್ಮ ತಾಲೂಕಿನ ಪ್ರಮುಖರು ಅವರು. ಈ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದಾಗ ನಾನು ಹೋಗಿರಲಿಲ್ಲ. ಇತ್ತೀಚೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿದ್ದೇನೆ ಅಷ್ಟೆ. ಅದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಅದು ಕೇವಲ ಸೌಹಾರ್ದಯುತ ಭೇಟಿ ಎಂದರು.